ಬಂಟ್ವಾಳ : ಟೋಲ್ ವಿವಾದ - ಕಾರು ಜಖಂಗೊಳಿಸಿದ ಬ್ರಹ್ಮರಕೂಟ್ಲು ಟೋಲ್ಗೇಟ್ ಸಿಬ್ಬಂದಿ
ಬಂಟ್ವಾಳ, ಎ.21: ಟೋಲ್ ಪಾವತಿ ವಿವಾದಕ್ಕೆ ಸಂಬಂಧಿಸಿ ಓಮ್ನಿ ಕಾರೊಂದರ ಚಾಲಕನ ನಡುವೆ ನಡೆದ ಮಾತಿನ ಚಕಮಕಿಯ ಬಳಿಕ ಬ್ರಹ್ಮರಕೊಟ್ಲು ಟೋಲ್ಗೇಟ್ ಸಿಬ್ಬಂದಿ ಓಮ್ನಿ ಕಾರಿಗೆ ಹಾನಿಗೊಳಿಸಿದ ಘಟನೆ ಗುರುವಾರ ಬೆಳಗ್ಗೆ 10:15ರ ವೇಳೆಗೆ ನಡೆದಿದೆ. ಘಟನೆಯ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕಾರು ಚಾಲಕ ಸಿಬ್ಬಂದಿಯೊಂದಿಗೆ ಮಾತಿಗಿಳಿದ ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಟೋಲ್ಗೇಟ್ ಸಮೀಪದ ರಾಮಲ್ಕಟ್ಟೆ ನಿವಾಸಿಯೊಬ್ಬರು ಓಮ್ನಿ ಕಾರಿನಲ್ಲಿ ಬಂದಾಗ ಟೋಲ್‌ಗೇಟ್ ಸಿಬ್ಬಂದಿ ಟೋಲ್ ಪಾವತಿಸುವಂತೆ ಸೂಚಿಸಿದ್ದಾನೆ. ಆದರೆ ತಾನು ಟೋಲ್ ಬೂತ್ ಸಮೀಪದ ನಿವಾಸಿಯಾಗಿದ್ದು ನಿಯಮದ ಪ್ರಕಾರ ಟೋಲ್ ನೀಡುವ ಅಗತ್ಯವಿಲ್ಲ ಎಂದು ಚಾಲಕ ಹೇಳಿದರು. ಆದರೆ ಇದಕ್ಕೆ ಒಪ್ಪದ ಟೋಲ್‌ಗೇಟ್ ಸಿಬ್ಬಂದಿಯೋರ್ವ ಏಕಾಏಕಿ ರಸ್ತೆಗೆ ಗೇಟ್ ಹಾಕಿ ಕಾರಿಗೆ ಹಾನಿಗೊಳಿಸಿದನೆನ್ನಲಾಗಿದೆ. ಇದರಿಂದ ಕಾರಿನ ಮೇಲ್ಭಾಗ ಹಾನಿಗೀಡಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಬಳಿಕ ಕಾರು ಚಾಲಕ ಮತ್ತು ಟೋಲ್‌ಗೇಟ್ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ತಾಲೂಕಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವ ಹಿನ್ನೆಲೆಯಲ್ಲಿ ಹೆಚ್ಚುವರಿ ಬಂದೋಬಸ್ತ್ ಗಾಗಿ ಟೋಲ್‌ಗೇಟ್ ಬಳಿ ನಿಯೋಜಿಸಲಾಗಿದ್ದ ಪೊಲೀಸರು ಕಾರು ಚಾಲಕನನ್ನು ಸಮಾಧಾನಪಡಿಸಿ ಕಳುಹಿಸುವಲ್ಲಿ ಕೊನೆಗೂ ಯಶಸ್ವಿಯಾದರು. ಟೋಲ್ ಸಿಬ್ಬಂದಿಯಿಂದ ನಿತ್ಯವೂ ದೌರ್ಜನ್ಯ: ''ನಾನು ಇಲ್ಲಿನ ಸಮೀಪದ ನಿವಾಸಿಯಾಗಿದ್ದು, ನಿಯಮದ ಪ್ರಕಾರ ಟೋಲ್ ನೀಡದೆ ಸಂಚರಿಸುವಾಗ ಇಲ್ಲಿನ ಸಿಬ್ಬಂದಿ ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯ ನಡೆಸುತ್ತಿದ್ದಾರೆ. ಇಲ್ಲಿ ಸಿಬ್ಬಂದಿ ಮಾತ್ರವಲ್ಲದೆ ಹೊರಗಿನ ಕೆಲವು ವ್ಯಕ್ತಿಗಳು ಇದ್ದು ಅವರು ಗೂಂಡರಂತೆ ವರ್ತಿಸುತ್ತಾರೆ'' ಎಂದು ಕಾರು ಚಾಲಕ ಆರೋಪಿಸಿದ್ದಾರೆ.