ಐಪಿಎಲ್: ಧರ್ಮಶಾಲಾದಲ್ಲಿ ಪಂಜಾಬ್‌ನ ತವರು ಪಂದ್ಯ

Update: 2016-04-21 07:59 GMT

 ಧರ್ಮಶಾಲಾ, ಎ.21: ಐಪಿಎಲ್ ಫ್ರಾಂಚೈಸಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ತವರು ಪಂದ್ಯಗಳು ಧರ್ಮಶಾಲಾದಲ್ಲಿ ನಡೆಯಲಿದೆ. ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಐಪಿಎಲ್ ಪಂದ್ಯಗಳ ಆತಿಥ್ಯವಹಿಸಿಕೊಳ್ಳಲು ಒಪ್ಪಿಗೆ ನೀಡಿದೆ.

  ಬರಪೀಡಿತ ಮಹಾರಾಷ್ಟ್ರದಿಂದ ಐಪಿಎಲ್ ಪಂದ್ಯಗಳನ್ನು ಸ್ಥಳಾಂತರಗೊಳಿಸುವಂತೆ ಬಾಂಬೆ ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಬಿಸಿಸಿಐ ನಾಗ್ಪುರದಲ್ಲಿ ನಡೆಯಬೇಕಾಗಿದ್ದ ಮೂರು ಪಂದ್ಯಗಳನ್ನು ಧರ್ಮಶಾಲಾಕ್ಕೆ ಸ್ಥಳಾಂತರಿಸಲು ಮುಂದಾಗಿದೆ.

ಪಂಜಾಬ್ ತಂಡ ಮೇನಲ್ಲಿ ನಾಗ್ಪುರದಲ್ಲಿ ಮೂರು ಪಂದ್ಯಗಳನ್ನು ಆಡಬೇಕಾಗಿತ್ತು. ನೀರಿನ ಕೊರತೆಯ ಹಿನ್ನೆಲೆಯಲ್ಲಿ ಎ.30ರ ಬಳಿಕ ಮುಂಬೈ, ಪುಣೆ ಹಾಗೂ ನಾಗ್ಪುರದಲ್ಲಿ ಪಂದ್ಯ ನಡೆಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿರುವ ಕಾರಣ 13 ಐಪಿಎಲ್ ಪಂದ್ಯಗಳ ಮೇಲೆ ದುಷ್ಪರಿಣಾಮ ಬೀರಿದೆ.

ಇದೀಗ ಧರ್ಮಶಾಲಾ ಪಂಜಾಬ್ ತಂಡದ ತವರು ಪಂದ್ಯಗಳ ಆತಿಥ್ಯಕ್ಕೆ ಮುಂದಾಗಿದೆ. ಇತ್ತೀಚೆಗೆ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಆತಿಥ್ಯದ ಹಕ್ಕನ್ನು ಭದ್ರತೆಯ ಕಾರಣದಿಂದಾಗಿ ಕಳೆದುಕೊಂಡಿದ್ದ ಧರ್ಮಶಾಲಾ ಆಗ ಮುಖಪುಟದಲ್ಲಿ ಸುದ್ದಿಯಾಗಿತ್ತು.

 ಮುಂಬೈ ಇಂಡಿಯನ್ಸ್ ಜೈಪುರವನ್ನು ತವರು ತಾಣವಾಗಿ ಆಯ್ಕೆ ಮಾಡಿದೆ. ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ ವಿಶಾಖಪಟ್ಟಣದಲ್ಲಿ ತನ್ನ ತವರು ಪಂದ್ಯಗಳನ್ನು ಆಡುವ ಬಯಕೆ ವ್ಯಕ್ತಪಡಿಸಿದೆ. ಮುಂಬೈನಲ್ಲಿ ಮೇ 29 ರಂದು ನಡೆಯಬೇಕಾಗಿರುವ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News