ಉಡುಪಿ: ಜಿಲ್ಲೆಯಲ್ಲಿ 2 ಹಿಂದಿ ಹಾರರ್ ಚಿತ್ರಗಳ ಚಿತ್ರೀಕರಣ ಪೂರ್ಣ
ಉಡುಪಿ, ಎ.21: ಸಮೃದ್ಧಿ ಮೂವೀಸ್ ಹಾಗೂ ದರಕ್ಷನ್ ಸಿದ್ಧಿಕಿ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಡಾರ್ಕ್ ಹೌಸ್’ ಹಾಗೂ ‘ತ್ರಿಡೇಸ್ ಆಫ್ ಹಾರರ್’ ಎಂಬ ಎರಡು ಹಿಂದಿ ಹಾರರ್ ಚಿತ್ರಗಳ ಚಿತ್ರೀಕರಣ ಕಾರ್ಕಳದ ಹಿರ್ಗಾನ ಆಸುಪಾಸಿನಲ್ಲಿ ಮುಕ್ತಾಯಗೊಂಡಿದೆ ಎಂದು ಚಿತ್ರದ ನಿರ್ಮಾಪಕರಾದ ಸುರೇಶ್ ಶೆಟ್ಟಿ ಮತ್ತು ಮುಂಬೈಯ ದರಕ್ಷನ್ ಸಿದ್ಧಿಕಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಂಬೈಯ ಮಡ್‌ಐಲ್ಯಾಂಡ್‌ನಲ್ಲಿ ಚಿತ್ರಗಳ ಚಿತ್ರೀಕರಣ ಪ್ರಾರಂಭಗೊಂಡಿದ್ದು, ಕಾಪೋಲಿ, ಫಿಲ್ಮ್ ಸಿಟಿಗಳಲ್ಲಿ ಶೂಟಿಂಗ್ ಮುಗಿದ ಬಳಿಕ ಹಿರ್ಗಾನದ ಪಾಲಿಜೆ ಹಾಗೂ ಸಮುದ್ರ ತೀರದ ಬೀಚ್‌ಗಳಲ್ಲಿ ಚಿತ್ರೀಕರಣ ನಡೆಯಿತು ಎಂದರು. ಡಾರ್ಕ್ ಹೌಸ್‌ಗೆ ರಫಾತ್ ಅಬ್ಬಾನ್ ಅಲಿ ನಿರ್ದೇಶಕರಾದರೆ, ತ್ರಿಡೇಸ್ ಆಫ್ ಹಾರರ್ ಚಿತ್ರವನ್ನು ಯೋಗೀಶ್ ಭಾಟಿಯಾ ನಿರ್ದೇಶಿಸುತ್ತಿದ್ದಾರೆ. ಇವೆರಡೂ ತಮ್ಮ ಸಂಸ್ಥೆಯ ಮೊದಲ ಚಿತ್ರಗಳಾಗಿದ್ದು, ಇನ್ನು ಮುಂದೆ ನಿರಂತರವಾಗಿ ಚಿತ್ರಗಳ ನಿರ್ಮಾಣ ನಡೆಯಲಿದೆ ಎಂದು ಸಿದ್ಧಿಕಿ ನುಡಿದರು.
ಎರಡು ಚಿತ್ರಗಳಲ್ಲೂ ಹೊಸಮುಖಗಳೇ ನಟಿಸುತ್ತಿವೆ. ಹಾರರ್ ಚಿತ್ರಗಳಲ್ಲಿ ಹೊಸಮುಖಗಳೇ ಹೆಚ್ಚು ಮಿಂಚುತ್ತವೆ. ಮೊದಲ ಚಿತ್ರಕ್ಕೆ ಅಂಕಿತ್ ರಾಘವ ಹಾಗೂ ಪೂಜಾ ಪೋದಾರ್ ನಾಯಕ, ನಾಯಕಿಯರಾಗಿ ನಟಿಸುತ್ತಿದ್ದಾರೆ ಎಂದರು. ಎರಡೂ ಚಿತ್ರಗಳ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಇನ್ನು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ 3-4 ತಿಂಗಳು ಬೇಕಾಗಬಹುದು. ಆ ಬಳಿಕ ಚಿತ್ರದ ಬಿಡುಗಡೆ ಬಗ್ಗೆ ನಿರ್ಧರಿಸಲಾಗುವುದು ಎಂದು ಸಿದ್ಧಿಕ್ ತಿಳಿಸಿದರು. ವಸಂತ ಕುಮಾರ್ ಉಪಸ್ಥಿತರಿದ್ದರು.