ಅಮೆರಿಕ: 5 ಲಕ್ಷ ಕಾರುಗಳನ್ನು ಮರು ಖರೀದಿಸಲಿರುವ ಫೋಕ್ಸ್‌ವ್ಯಾಗನ್
ವಾಶಿಂಗ್ಟನ್, ಎ. 21: ವಾಯುಮಾಲಿನ್ಯ ತಪಾಸಣೆಯನ್ನು ವಂಚಿಸುವ ಸಾಫ್ಟ್‌ವೇರೊಂದನ್ನು ತನ್ನ ಕಾರುಗಳಲ್ಲಿ ಅಳವಡಿಸಿ ಸುದ್ದಿಯಲ್ಲಿರುವ ಜರ್ಮನಿಯ ಕಾರು ತಯಾರಕ ಸಂಸ್ಥೆ ಫೋಕ್ಸ್‌ವ್ಯಾಗನ್ ಮತ್ತು ಅಮೆರಿಕದ ಅಧಿಕಾರಿಗಳು ಒಪ್ಪಂದವೊಂದಕ್ಕೆ ಬಂದಿದ್ದಾರೆ.
ಈ ಒಪ್ಪಂದದ ಪ್ರಕಾರ, ಇಂಥ ಸಾಫ್ಟ್‌ವೇರ್ ಹೊಂದಿದ ಸುಮಾರು 5 ಲಕ್ಷ ಡೀಸೆಲ್ ಕಾರುಗಳನ್ನು ಮರಳಿ ಖರೀದಿಸುವ ಕೊಡುಗೆಯೊಂದನ್ನು ಫೋಕ್ಸ್‌ವ್ಯಾಗನ್ ನೀಡಿದೆ.
ತಾನು ಅಮೆರಿಕದಲ್ಲಿ ಮಾರಾಟ ಮಾಡಿದ 5 ಲಕ್ಷ 2.0-ಲೀಟರ್ ಡೀಸೆಲ್ ವಾಹನಗಳನ್ನು ಮರಳಿ ಖರೀದಿಸುವ ಕೊಡುಗೆ ನೀಡುವ ಪ್ರಸ್ತಾಪಕ್ಕೆ ತಾನು ಒಪ್ಪಿಗೆ ನೀಡಿರುವುದಾಗಿ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿನ ಫೆಡರಲ್ ನ್ಯಾಯಾಲಯವೊಂದಕ್ಕೆ ಫೋಕ್ಸ್‌ವ್ಯಾಗನ್ ತಿಳಿಸಲಿದೆ ಎಂದು ನಿರೀಕ್ಷಿಸಲಾಗಿದೆ.
2009ರ ನಂತರ ಮಾರಾಟ ಮಾಡಲಾದ ಜೆಟ್ಟಾ ಸೆಡಾನ್, ಗಾಲ್ಫ್ ಕಾಂಪ್ಯಾಕ್ಟ್ ಮತ್ತು ಆಡಿ ಎ3ಗಳ ವಿವಿಧ ಮಾದರಿಗಳು ಮರುಖರೀದಿಯ ವ್ಯಾಪ್ತಿಗೆ ಬರುತ್ತದೆ.
ಆದಾಗ್ಯೂ, 80 ಸಾವಿರ ದೊಡ್ಡ ಗಾತ್ರದ 3.0-ಲೀಟರ್ ಡೀಸೆಲ್ ವಾಹನಗಳು ಅಮೆರಿಕದ ವಾಯು ಮಾಲಿನ್ಯ ಮಿತಿಯನ್ನು ಉಲ್ಲಂಘಿಸಿದ್ದರೂ ಅವುಗಳಿಗೆ ಈ ಮರು ಖರೀದಿ ಕೊಡುಗೆ ಅನ್ವಯಿಸುವುದಿಲ್ಲ. ಅವುಗಳಲ್ಲಿ ಆಡಿ ಮತ್ತು ಪೋರ್ಶೆ ಎಸ್‌ಯುವಿ ಮಾದರಿಗಳು ಸೇರಿವೆ.
2009ರ ಬಳಿಕ ಜಗತ್ತಿನಾದ್ಯಂತ ಮಾರುಕಟ್ಟೆಗೆ ಬಂದ ತನ್ನ ಸುಮಾರು 1.1 ಕೋಟಿ ಡೀಸೆಲ್ ವಾಹನಗಳಲ್ಲಿ ತಾನು ವಾಯು ಮಾಲಿನ್ಯ ತಪಾಸಣೆಯನ್ನು ವಂಚಿಸುವ ಸಾಫ್ಟ್‌ವೇರನ್ನು ಅಳವಡಿಸಿರುವುದನ್ನು ಜರ್ಮನಿಯ ಕಾರು ತಯಾರಕ ದೈತ್ಯ ಫೋಕ್ಸ್‌ವ್ಯಾಗನ್ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಒಪ್ಪಿಕೊಂಡಿತ್ತು.