ಕುಡಿಯುವ ನೀರಿನ ಸಮಸ್ಯೆಯಿಂದ ಜನತೆ ಆತಂಕ ಪಡುವ ಅಗತ್ಯವಿಲ್ಲ : ಶಿವರಾಮ ಹೆಬ್ಬಾರ
ಮುಂಡಗೋಡ ಕುಡಿಯುವ ನೀರು ಕಾಮಗಾರಿ ಪ್ರಾರಂಭಿಸುವಲ್ಲಿ ವಿಳಂಬ ಮಾಡಿದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳನ್ನು ಶಾಸಕ ಶಿವರಾಮ ಹೆಬ್ಬಾರ ತೀವ್ರ ತರಾಟೆಗೆ ತೆಗೆದುಕೊಂಡರು. ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಬರಗಾಲ ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಅಧೀಕಾರಿಗಳ ಸಭೆಯಲ್ಲಿ ಕಾಮಗಾರಿ ಪೂರೈಸಿದವರಿಗೆ
ಇಲಾಖೆಯಿಂದ ನಿಗದಿತ ಸಮಯದಲ್ಲಿ ಹಣ ಪಾವತಿಸದಿದ್ದರೆ ಯಾರು ನಿಮ್ಮ ಕೆಲಸಕ್ಕೆ ಬರುತ್ತಾರೆ ಎಂದು ಪ್ರಶ್ನಿಸಿದ ಶಾಸಕರು, ತಕ್ಷಣ ಬಾಕಿ ಉಳಿಸಿಕೊಂಡವರ ಹಣ ಪಾವತಿಸಿ ಎಂದು ಸೂಚಿಸಿದರು. ಕುಡಿಯುವ ನೀರಿನ ಸಮಸ್ಯೆಯಿಂದ ಜನತೆ ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಭಾಗದಲ್ಲಿ ನೀರಿನ ಸಮಸ್ಯೆ ಇದ್ದರೂ ಅದನ್ನು ಸಮರ್ಪಕವಾಗಿ ಪರಿಹರಿಸುವಷ್ಟು ಹಣವನ್ನು ಮೀಸಲಿಡಲಾಗಿದೆ ಪಟ್ಟಣದಲ್ಲಿ ಈ ಹಿಂದಿನಂತೆ 2 ದಿನಕ್ಕೊಂದು ಬಾರಿಯೆ ಕುಡಿಯುವ ನೀರು ಪೂರೈಸುವುದನ್ನು ಮುಂದುವರೆಸುವಂತೆ ಮುಖ್ಯಾಧಿಕಾರಿ ಸಂಗನಬಸಯ್ಯಗೆ ಸೂಚಿಸಿದರು. ಅಗತ್ಯವಿದ್ದಷ್ಟು ಟ್ಯಾಂಕರ್ ಗಳನ್ನು ಬಳಸಿಕೊಂಡು ನೀರು ಪೂರೈಸಿ ಹಣ ಎಷ್ಟು ಬೇಕಾದರೂ ನೀಡಲು ಸರ್ಕಾರ ಸಿದ್ದವಿದೆ ಎಂದ ಅವರು, ಸರ್ಕಾರಿ ಇಲಾಖೆಗೆ ಸಂಬಂಧಪಟ್ಟ ಎಲ್ಲ ಬೋರವೆಲ್ ಗಳನ್ನು ಸಾರ್ವಜನಿಕರಿಗೆ ನೀರು ಪೂರೈಸಲು ಬಳಸಿಕೊಳ್ಳುವಂತೆ ತಹಸೀಲ್ದಾರ ಅಶೋಕ ಗುರಾಣಿಗೆ ಸೂಚಿಸಿದರು. ಉಪವಿಭಾಗಾಧಿಕಾರಿಗಳೊಂದಿಗೂ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದರು.
.
ತಹಸೀಲ್ದಾರ ಅಶೋಕ ಗುರಾಣಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಬಿ.ಎಲ್.ಬೈರವಾಡಗಿ, ಪ.ಪಂ ಅಧ್ಯಕ್ಷ ರಫೀಕ್ ಇನಾಮದಾರ, ಮುಖ್ಯಾಧಿಕಾರಿ ಸಂಗನಬಸಯ್ಯ ಹಾಗೂ ತಾ.ಪಂ ಸದಸ್ಯರು ಉಪಸ್ಥಿತರಿದ್ದರು.