ಮಂಗಳೂರು: ಕಾಟಿಪಳ್ಳ ಬಳಿ ಕೋಮುದ್ವೇಷದ ಬ್ಯಾನರ್
ಮಂಗಳೂರು, ಎ. 21: ಎಪ್ರಿಲ್ 19ರಿಂದ 23ರವರೆಗೆ ನಡೆಯುವ ಕಾಟಿಪಳ್ಳ ಗಣೇಶಪುರದ ಶ್ರೀ ಮಹಾಗಣಪತಿ ದೇವಸ್ಥಾನದ ಜಾತ್ರಾಮಹೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ವಠಾರದಲ್ಲಿ ಹಿಂದೂಯೇತರರು ಅಂಗಡಿ, ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಹೆಸರಿನಲ್ಲಿ ಕಾಟಿಪಳ್ಳ ಬಳಿಯಲ್ಲಿ ಕೋಮುದ್ವೇಷದ ಬ್ಯಾನರ್‌ವೊಂದು ಕಂಡುಬಂದಿದೆ.
ಮುಜರಾಯಿ ಇಲಾಖೆಗೆ ಒಳಪಡುವ ಶ್ರೀ ಮಹಾಗಣಪತಿ ದೇವಸ್ಥಾನ ಪ್ರತಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲೂ ಹಿಂದೂ ಬಾಂಧವರ ಸಹಿತ ಹಿಂದೂಯೇತರು ಕೂಡ ಅಂಗಡಿಗಳನ್ನು ಇಟ್ಟು ವ್ಯಾಪಾರ ನಡೆಸಿಕೊಂಡು ಬರುತ್ತಿದ್ದಾರೆ ಎಂಬುದು ಸ್ಥಳೀಯರ ಅಂಬೋಣ. ಜಾತ್ರಾ ಮಹೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡುವುದು ಅಥವಾ ನೀಡದಿರುವುದು ದೇವಸ್ಥಾನದ ಆಡಳಿತ ಮಂಡಳಿಗೆ ಬಿಟ್ಟ ವಿಚಾರ. ಆದರೆ, ದೇವಸ್ಥಾನದ ವಿಷಯಕ್ಕೆ ಸಂಬಂಧಿಸಿ ಯಾವುದೇ ಅಧಿಕಾರ ಇಲ್ಲದ ‘ಹಿಂದೂ ಜಾಗರಣಾ ವೇದಿಕೆ’ ಎಂಬ ಸಂಘಟನೆಯವರು ಇನ್ನೋರ್ವನ ಅಧಿಕಾರವನ್ನು ಬ್ಯಾನರ್ ಮೂಲಕ ಹೇರಲು ಪ್ರಯತ್ನಿಸಿರುವುದು ಎಷ್ಟು ಸರಿ ಎಂಬ ಆರೋಪಗಳು ಸಾರ್ವಜನಿಕವಾಗಿ ಕೇಳಿಬಂದಿವೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತಾಧಿಕಾರಿ ನಿಂಗಯ್ಯ ಅವರು, ‘‘ಬ್ಯಾನರ್ ಹಾಕಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಆದರೆ, ಶ್ರೀ ಮಹಾಗಣಪತಿ ದೇವಸ್ಥಾನದ ಪ್ರತಿ ಜಾತ್ರಾ ಮಹೋತ್ಸವದಲ್ಲೂ ಹಿಂದೂ ಬಾಂಧವರ ಸಹಿತ ಹಿಂದೂಯೇತರರೂ ಅಂಗಡಿಗಳನ್ನಿಟ್ಟು ವ್ಯಾಪಾರ ನಡೆಸುತ್ತಾ ಬಂದಿದ್ದಾರೆ. ಅದು ಹಿಂದಿನಿಂದಲೂ ನಡೆದು ಬಂದಿದೆ. ಇತರ ಧರ್ಮದವರು ವ್ಯಾಪಾರ ನಡೆಸಬಾರದೆಂಬುದು ಸರಿಯಲ್ಲ. ಬ್ಯಾನರ್ ಹಾಕಿರುವ ಬಗ್ಗೆ ಪರಿಶೀಲಿಸುತ್ತೇನೆ’’ ಎಂದರು.