×
Ad

ಹೆಜಮಾಡಿಯಲ್ಲಿ ರಾಷ್ಟ್ರೀಯ ಪಂಚಾಯತ್ ದಿವಸ್

Update: 2016-04-22 00:12 IST

ಪಡುಬಿದ್ರೆ, ಎ.21: ಗ್ರಾಮದ ಸಮಗ್ರ ಅಗತ್ಯತೆಗಳ ಬಗ್ಗೆ ಚರ್ಚಿಸಿ ಪಂಚವಾರ್ಷಿಕ ಯೋಜನೆ ತಯಾರಿಸಲಾಗಿದೆ ಎಂದು ಉಡುಪಿ ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದರು.

ಹೆಜಮಾಡಿ ಗ್ರಾಪಂನಲ್ಲಿ ರಾಷ್ಟ್ರೀಯ ಸಮರಸತಾ ದಿವಸ್ ಮತ್ತು ರಾಷ್ಟ್ರೀಯ ಪಂಚಾಯತ್ ದಿವಸ್ ಅಂಗವಾಗಿ ಗುರು ವಾರ ನಡೆದ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಗ್ರಾಮದ ಎಲ್ಲಾ ಅನುದಾನಗಳನ್ನು ಮುಂದೆ ಈ ಯೋಜನೆಯ ಮೂಲಕವೇ ಜಾರಿಗೊಳಿಸಬೇಕಾಗಿದೆ ಎಂದರು.

ಗ್ರಾಮಮಟ್ಟದಲ್ಲಿ ನಡೆಯುವ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ಕ್ರಮಬದ್ಧವಾಗಿ ನಡೆಸುವ ಉದ್ದೇಶದಿಂದ ಕೇಂದ್ರ ಸರಕಾರ ‘ಗ್ರಾಮ ಉದಯ್ ಸೆ ಭಾರತ್ ಉದಯ್ ಅಭಿಯಾನ್’ ಕಾರ್ಯಕ್ರಮ ನಡೆಸುತ್ತಿದೆ. ಕೇಂದ್ರ ಸರಕಾರದ ನಿರ್ದೇಶನದಂತೆ ಮುಂದಿನ 5 ವರ್ಷಗಳ ಪಂಚವಾರ್ಷಿಕ ಯೋಜನೆಯ ಬಗ್ಗೆ ಚರ್ಚೆ ನಡೆಸಿ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯ ಲಾಗುವುದು ಎಂದರು.

ಉದ್ಯೋಗ ಖಾತರಿ ಯೋಜನೆ ಜಿಲ್ಲೆ ಯಲ್ಲಿ ಯಶಸ್ವಿಯಾಗಿಲ್ಲ. ಈ ಯೋಜ ನೆಯ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಈ ಸಂದರ್ಭ ವಿನಂತಿಸಿದರು.

ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ

ಹೆದ್ದಾರಿ ಬಳಿ ಟೋಲ್‌ಗೇಟ್ ನಿರ್ಮಾಣ ದಿಂದ ಜಾಗ ಕಳೆದುಕೊಂಡ 14 ಕುಟುಂಬ ಗಳಿಗೆ ವರ್ಷ ಕಳೆದರೂ ಪುನರ್ವಸತಿ ಕಲ್ಪಿಸದ ಬಗ್ಗೆ ದಲಿತ ನಾಯಕ ಶೇಖರ್ ಹೆಜ್ಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೆಲವೊಂದು ತಾಂತ್ರಿಕ ತೊಂದರೆಯಿಂದ ಮನೆ ನಿವೇಶನ ನೀಡಲು ಅಡಚಣೆಯಾಗಿದೆ. ಮುಂದಿನ 10 ದಿನದೊಳಗೆ ಎಲ್ಲರಿಗೂ ಮನೆ ನಿವೇಶನ ಹಂಚಲಾಗುವುದು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಹೇಳಿದರು.
ವಿವಿಧ ಇಲಾಖೆಗಳ ಮಾಹಿತಿ
ಪೊಲೀಸ್ ಇಲಾಖೆಯ ಬಗ್ಗೆ ಪಡುಬಿದ್ರೆ ಠಾಣಾಧಿಕಾರಿ ಅಜ್ಮತ್ ಅಲಿ, ಮಕ್ಕಳು ಮತ್ತು ಮಹಿಳೆಯರ ಕಾನೂನು ಅರಿವು ಬಗ್ಗೆ ಬಾರ್ಕೂರು ಮಹಿಳಾ ಕಾಲೇಜು ಉಪನ್ಯಾಸಕಿ ಪ್ರಮೀಳಾ ವಾಜ್, ಪ.ಜಾ., ಪ.ಪಂ. ಫಲಾನುಭವಿಗಳಿಗೆ ಕಾನೂನು ಅರಿವು ಬಗ್ಗೆ ನ್ಯಾಯವಾದಿ ಮಂಜುನಾಥ್ ವಿ. ಮಾಹಿತಿ ನೀಡಿದರು.


ಇದೇ ವೇಳೆ ಸಾರ್ವಜನಿಕರಿಗೆ ಚೆನ್ನೆಮಣೆ, ಸಂಗೀತ ಕುರ್ಚಿ, ಕುಂಟೆ ಬಿಲ್ಲೆ, ಅಂಬೇಡ್ಕರ್ ಭಾವಚಿತ್ರ ಬಿಡಿಸುವ ಸ್ಪರ್ಧೆ ಸಹಿತ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ವಿ. ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆ ಅಧಿಕಾರಿ ವಿಶ್ವಾಸ್ ನೋಡಲ್ ಅಧಿಕಾರಿ ಯಾಗಿದ್ದರು. ತಾಪಂ ಸದಸ್ಯೆ ರೇಣುಕಾ ಪುತ್ರನ್, ವಿವಿಧ ಇಲಾಖಾ ಅಧಿಕಾರಿಗಳು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಮತಾ ಶೆಟ್ಟಿ ಕಾರ್ಯಕ್ರಮ ನಡೆಸಿ ಕೊಟ್ಟರು. ಕೇಂದ್ರ ಸರಕಾರದ ವೀಕ್ಷಕ ಸುಮನ್ ಚಟರ್ಜಿ ಕಾರ್ಯಕ್ರಮವನ್ನು ದಾಖಲಿಸಿಕೊಂಡರು.
ಹಣ್ಣಹಂಪಲು, ತರಕಾರಿಗಳಿಗೆ ಕ್ರಿಮಿನಾಶಕ: ಕ್ರಮಕ್ಕೆ ಆಗ್ರಹ
ಗ್ರಾಮಸಭೆಗೆ ಮುನ್ನ ನಡೆದ ಕಿಸಾನ್ ಸಭೆಯಲ್ಲಿ ಮಾಧ್ಯಮದವರು ಜಿಲ್ಲೆಯಲ್ಲಿ ತರಕಾರಿ ಮತ್ತು ಹಣ್ಣುಹಂಪಲುಗಳಿಗೆ ಯಥೇಚ್ಛ ಕ್ರಿಮಿನಾಶಕ ಬಳಕೆ ಬಗ್ಗೆ ಅಧಿಕಾರಿ ಗಳ ಗಮನ ಸೆಳೆದರು. ಮರದಲ್ಲಿ ಕೊಯ್ದ ಒಂದೆರಡು ದಿನದಲ್ಲೇ ಮಾವಿನಹಣ್ಣುಗಳು ಹೇಗೆ ಮಾರುಕಟ್ಟೆಗೆ ಬರುತ್ತದೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕೋರಿದರು. ಅವಿಭಜಿತ ಜಿಲ್ಲೆಯ ಹಲವೆಡೆ ತರಕಾರಿ ಮತ್ತು ಹಣ್ಣುಹಂಪಲುಗಳನ್ನು ಒಂದೇ ದಿನದಲ್ಲಿ ಮಾಗಿಸುವ ಗೋಡೌನ್‌ಗಳಿವೆ ಎಂದು ಸಾರ್ವಜನಿಕರೊಬ್ಬರು ಮಾಹಿತಿ ನೀಡಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಕೂಡಲೇ ತಪಾಸಣೆ ನಡೆಸಿ ಕ್ರಮಕೈಗೊಳ್ಳು ವಂತೆ ಕೃಷಿ ಅಧಿಕಾರಿಗಳಿಗೆ ಆದೇಶಿಸಿದರು.
ಇದೇ ಸಂದಭರ್ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಜಿಲ್ಲೆಯ ಕೆಲವು ಗ್ರಾಮಗಳನ್ನು ಸಾವಯವ ಗ್ರಾಮಗಳನ್ನಾಗಿ ಮಾಡಲಾಗಿದೆ. ಹಾಗಾಗಿ ಈಗ ಸಾವಯವ ಬೆಳೆ ಚೆನ್ನಾಗಿ ಬರುತ್ತಿದೆ. ಉಡುಪಿ, ಚಿಕ್ಕಮಗಳೂರು, ದ.ಕ. ಜಿಲ್ಲೆಗಳನ್ನೊಳಗೊಂಡ ಸಾವಯವ ಒಕ್ಕೂಟ ರಚನೆಯೂ ಆಗಿದೆ. ಮುಂದೆ ಸಾವಯವ ಮಾರುಕಟ್ಟೆ ನಿರ್ಮಾಣ ಶೀಘ್ರ ರಚನೆಯಾಗಲಿದೆ ಎಂದರು.
ವಿವಿಧ ಇಲಾಖೆಗಳ ವಸ್ತು ಪ್ರದರ್ಶನ
ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಮೀನುಗಾರಿಕಾ ಇಲಾಖೆ, ಕೈಮಗ್ಗ ಹಾಗೂ ಜವಳಿ ಇಲಾಖೆ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಇಲಾಖೆಗಳ ವಸ್ತು ಪ್ರದರ್ಶನ ಗ್ರಾಮಸ್ಥರ ಗಮನಸೆಳೆಯಿತು.

ಸದ್ಭಾವನಾ-ಸಮತಾ ಸಮಾಜದ ಪ್ರತಿಜ್ಞಾ ಸ್ವೀಕಾರ


ಬಾಬಾ ಸಾಹೇಬ್ ಡಾ. ಅಂಬೇಡ್ಕರ್‌ರ 125ನೆ ಜಯಂತಿ ಅಂಗವಾಗಿ ಗ್ರಾಮಸ್ಥರು ಸಾಮಾಜಿಕ ಸದ್ಭಾವನಾ ಮತ್ತು ಸಮತಾ ಸಮಾಜವನ್ನು ನಿರ್ಮಾಣ ಮಾಡಲು ಶ್ರಮಿಸುತ್ತೇವೆಂದು ಪ್ರಮಾಣವಚನ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News