×
Ad

ತಲಾಕ್ ದುರ್ಬಳಕೆ ವಿರುದ್ಧ ಜಾಗೃತಿ ಮೂಡಿಸುತ್ತಿರುವ ತೆಲಂಗಾಣದ ಖಾಝಿಗಳು

Update: 2016-04-22 09:05 IST

ಹೈದರಾಬಾದ್, ಎ. 22: ತಲಾಕ್ ಪದ್ಧತಿ ರದ್ದು ಮಾಡುವ ಪ್ರಸ್ತಾವದ ವಿರುದ್ಧ ಶಾಯರಾಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೋರಾಟ ನಡೆಸುತ್ತಿದ್ದರೆ, ತೆಲಂಗಾಣದ ಖಾಝಿಗಳು ಸದ್ದುಗದ್ದಲವಿಲ್ಲದೇ ಇಂಥ ಏಕಪಕ್ಷೀಯ ತಲಾಕ್ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದಾರೆ. ಈ ಮೂಲಕ ಬದಲಾವಣೆಯ ಮೌನಕ್ರಾಂತಿಯ ಹರಿಕಾರರಾಗಿದ್ದಾರೆ.


ಕಳೆದ ಕೆಲ ತಿಂಗಳುಗಳಿಂದ ಇಂಥ ನೂರಾರು ಪ್ರಕರಣಗಳಲ್ಲಿ ಪತ್ನಿಯರಿಗೆ ವಿಚ್ಛೇದನದ ಕಾರಣ ವಿವರಿಸದೇ ಏಕಪಕ್ಷೀಯ ನಿರ್ಧಾರ ಕೈಗೊಂಡು ಪುರುಷರು ತಲಾಕ್‌ಗೆ ಮುಂದಾಗುತ್ತಿದ್ದಾರೆ. ಅಂಥ ಗಂಡಂದಿರು ಖಾಝಿಗಳಲ್ಲಿ ಮೆಹರ್ ಠೇವಣಿ ಇಟ್ಟು, ಪತ್ನಿಯರಿಗೆ ವಿಚ್ಛೇದನದ ನೋಟಿಸ್ ಕಳುಹಿಸುವಂತೆ ಮನವಿ ಸಲ್ಲಿಸುತ್ತಾರೆ. ಈ ಪ್ರಕ್ರಿಯೆಗೆ ಯಾವುದೇ ಧಾರ್ಮಿಕ ಮಾನ್ಯತೆ ಇಲ್ಲ ಎನ್ನುವುದು ಖಾಝಿಗಳ ಅಭಿಮತ.


ಕನಿಷ್ಠ ಅಂಥ 200 ಮನವಿಗಳನ್ನು ತಾವು ತಿರಸ್ಕರಿಸಿದ್ದಾಗಿ ಅಂಜುಮನ್ ಇ ಖ್ವಾಝತ್‌ನ ಮುಖ್ಯಸ್ಥ ಖಾಝಿ ಮಿರ್ ಮಹ್ಮದ್ ಖಾದರ್ ಅಲಿ ಹೇಳುತ್ತಾರೆ. ಇಂಥ ಪ್ರಕರಣಗಳಲ್ಲಿ ಅರ್ಜಿದಾರರ ಪತ್ನಿ ಕೂಡಾ ಜತೆಗೆ ಇರುವುದು ಕಡ್ಡಾಯ ಎಂದು ಸೂಚಿಸಿದ್ದಾಗಿ ಅವರು ಹೇಳುತ್ತಾರೆ.

"ತಲಾಕ್‌ಗೆ ಕಾನೂನಾತ್ಮಕ ಅವಕಾಶ ಇದೆ. ಆದರೆ ಪತ್ನಿಗೆ ಆ ಬಗ್ಗೆ ಮಾಹಿತಿ ನೀಡದೇ, ಖಾಝಿಗಳಲ್ಲಿ ಮೆಹರ್ ಠೇವಣಿ ಇಟ್ಟು, ಮನವಿ ಮಾಡುವುದು ಸರಿಯಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ. ಹಾಗೆ ಮಾಡುವುದು ಇಸ್ಲಾಂ ಹಾಗೂ ಇಸ್ಲಾಮಿಕ್ ಕಾನೂನನ್ನು ಅರ್ಥ ಮಾಡಿಕೊಳ್ಳದವರು. ಇದು ವಿಚ್ಛೇದನಕ್ಕೆ ಇರುವ ಅವಕಾಶದ ದುರ್ಬಳಕೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.


ಸಿಕಂದರಾಬಾದ್‌ನ ಮುಖ್ಯ ಖಾಝಿ ಸಯ್ಯದ್ ಶಾ ನೂರುಲ್ ಅಸ್ಫಿಯಾ ಸೂಫಿ, ನಲ್ಗೊಂಡ ಖಾಝಿ ಇಕ್ರಮುಲ್ಲಾ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News