×
Ad

ದಿನಕ್ಕೆ 250 ಕೋಟಿ ಸಂಪಾದಿಸಿದರೂ ಸಮರ್ಪಕ ಸೇವೆ ನೀಡುವುದಿಲ್ಲ : ಆರೋಪ

Update: 2016-04-22 09:24 IST

ಹೊಸದಿಲ್ಲಿ, ಎ. 22: ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಕರೆ ಕಡಿತಕ್ಕೆ ದಂಡ ವಿಧಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಟೆಲಿಕಾಂ ಕಂಪೆನಿಗಳು ದಿನಕ್ಕೆ 250 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದರೂ, ಕೇವಲ ನಾಲ್ಕು ಶೇಕಡ ಹಣವನ್ನಷ್ಟೇ ಸೇವೆ ಸುಧಾರಣೆ ನಿಟ್ಟಿನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸುತ್ತಿವೆ ಎಂದು ಚಾಟಿ ಬೀಸಿದೆ.

ಪ್ರತಿ ಕಡಿತಗೊಂಡ ಕರೆಗಳಿಗೆ ಸಂಬಂಧಿಸಿದಂತೆ ಗ್ರಾಹಕರ ಖಾತೆಗೆ ಒಂದು ರೂಪಾಯಿಯಂತೆ ದಂಡ ಪಾವತಿಸುವಂತೆ ಪ್ರಾಧಿಕಾರ ಜನವರಿ ಒಂದರಂದು ಸೂಚನೆ ನೀಡಿತ್ತು. ಗರಿಷ್ಠ ದಿನಕ್ಕೆ ಮೂರು ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಿತ್ತು. ಮೊಬೈಲ್ ಕರೆಗಳಿಂದ ವರ್ಷಕ್ಕೆ ಒಂದು ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದರೂ, ಗ್ರಾಹಕರಿಗೆ ಉತ್ತಮ ಸೇವೆ ನೀಡದಿರಲು ದೂರಸಂಪರ್ಕ ಸೇವಾ ಸಂಸ್ಥೆಗಳು ಮಾಫಿಯಾ ಮಾಡಿಕೊಂಡಿವೆ ಎಂದು ಪ್ರಾಧಿಕಾರ ಹೇಳಿದೆ.

ಕಂಪೆನಿಗಳ ದೈನಿಕ ಆದಾಯ 250 ಕೋಟಿ. 2010-15ರ ಅವಧಿಯಲ್ಲಿ ಇವುಗಳ ಗ್ರಾಹಕ ಜಾಲ 60 ಕೋಟಿಯಿಂದ 100 ಕೋಟಿಗೆ ತಲುಪಿದೆ. ಶೇಕಡ 61ರಷ್ಟು ಪ್ರಗತಿ ಕಂಡಿದೆ ಎಂದು ಪ್ರಾಧಿಕಾರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹಾಜರಾದ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ವಿವರಿಸಿದರು.

ಇದೇ ಅವಧಿಯಲ್ಲಿ ಆದಾಯ ಶೇಕಡ 48ರಷ್ಟು ಹೆಚ್ಚಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಸಲುವಾಗಿ ಕೇವಲ ಶೇಕಡ 4ರಷ್ಟು ಆದಾಯವನ್ನು ಮಾತ್ರ ಹೂಡಿಕೆ ಮಾಡಿವೆ ಎಂದು ಹೇಳಿದರು. ಕಳಪೆ ಸೇವೆಗೆ ಟವರ್‌ಗಳ ಕೊರತೆ ಕಾರಣ ಎಂದು ಕಂಪೆನಿಗಳು ಹೇಳುತ್ತಿವೆ. ಆದರೆ ಹಲವು ವಸತಿ ಪ್ರದೇಶಗಳಲ್ಲಿ ಹೆಚ್ಚುವರಿ ಟವರ್ ಅಳವಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.


ಟ್ರಾಯ್ ನಿರ್ದೇಶನವನ್ನು ತಡೆಹಿಡಿಯಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ದಿಲ್ಲಿ ಹೈಕೋರ್ಟ್ ನಿರ್ಧಾರದ ವಿರುದ್ಧ ಕಂಪೆನಿಗಳು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಹಾಗೂ ರೋಹಿಂಟನ್ ನಾರಿಮನ್ ಅವರನ್ನೊಳಗೊಂಡ ಪೀಠ ಈ ಬಗ್ಗೆ ವಿಚಾರಣೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News