ಕೇರಳದಲ್ಲಿ ಕಳ್ಳಭಟ್ಟಿ ದುರಂತ ಸಾಧ್ಯತೆ!: ಇಂಟಲಿಜೆನ್ಸ್ ವರದಿ
ತಿರುವನಂತಪುರಂ, ಎಪ್ರಿಲ್ 22: ಕೇರಳ ರಾಜ್ಯದ ವಿಧಾನಸಭಾ ಚುನಾವಣೆಯ ವೇಳೆ ಕಳ್ಳಭಟ್ಟಿ(ನಕಲಿ ಮದ್ಯ) ದುರಂತ ಸಾಧ್ಯತೆಯಿದೆ ಎಂದು ಇಂಟಲಿಜೆನ್ಸ್ ವರದಿ ನೀಡಿರುವುದಾಗಿ ವರದಿಯಾಗಿದೆ. ಇದನ್ನು ತಡೆಯಲಿಕ್ಕಾಗಿ ಪೊಲೀಸ್, ಎಕ್ಸೈಸ್ ವ್ಯವಸ್ಥೆ ಕಾರ್ಯದಕ್ಷಗೊಳಿಸಬೇಕೆಂದು ಡಿಜಿಪಿಐ ಹೇಮಚಂದ್ರನ್ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಬೆಟ್ಟು ಮಾಡಿದ್ದಾರೆ.
ರಾಜ್ಯದಲ್ಲಿ ಮುಚ್ಚಿದ ಬಾರ್‌ಗಳನ್ನ ತೆರೆಯಬೇಕಿಲ್ಲವೆಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ನೀಡಿದ ಹೇಳಿಕೆಯ ನಂತರ ಮದ್ಯಲಾಬಿ ಕ್ರಮಗಳನ್ನು ಕೈಗೊಂಡಿವೆ ಎಂದು ಸೂಚನೆ ಲಭಿಸಿದೆ.
ಬಾರ್‌ಗಳನ್ನು ಶಾಶ್ವತವಾಗಿ ಮುಚ್ಚಿದರೆ ಆದಾಯ ಹೆಚ್ಚಳ ಸಾಧ್ಯತೆಗಳು ಇಲ್ಲದಾಗುವುದು. ಇದನ್ನು ಮುಂದಿಟ್ಟು ಸ್ಪಿರಿಟ್ ವ್ಯಾಪಾರ ಮುಂತಾದುವುಗಳನ್ನು ಪ್ರಚೋದಿಸಲು ಮದ್ಯಲಾಬಿಗಳು ಶ್ರಮಿಸಬಹುದು. ಅವರ ನಡಾವಳಿಕೆ ಸಂಶಯಾಸ್ಪದವಾಗಿದೆ. ಚುನಾವಣೆ ಮೊದಲು ಕಳ್ಳಭಟ್ಟಿ ಹರಿಯಬಿಟ್ಟರೆ ಲಾಭ ಕೊಳ್ಳೆ ಹೊಡೆಯಬಹುದೆಂದು ವಿಷಮದ್ಯವನ್ನು ತಯಾರಿಸುವ ಸಾಧ್ಯತೆಗಳನ್ನು ನಿರಾಕರಿಸಲಾಗದು. ಎಕ್ಸೈಸ್ ಅಧಿಕಾರಿಗಳ ಮೇಲ್ನೋಟದಲ್ಲಿಬಿಯರ್, ವೈನ್ ಪಾರ್ಲರ್‌ಗಳಲ್ಲಿ ಮತ್ತು ಶೇಂದಿ ಅಂಗಡಿಗಳಲ್ಲಿ ತಪಾಸಣೆ ನಡೆಯುತ್ತಿದೆ.
ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕಳ್ಳಭಟ್ಟಿಗೆ ಕುಪ್ರಸಿದ್ಧವಾದ ಸ್ಥಳಗಳಲ್ಲಿ ತಪಾಸಣೆ ಬಿಗಿಗೊಳಿಸಬೇಕು.ಚೆಕ್‌ಪೋಸ್ಟ್ ತಪಾಸಣೆ ಹೆಚ್ಚು ತೀವ್ರಗೊಳಿಸಬೇಕು. ಪೊಲೀಸ್, ಎಕ್ಸೈಸ್ ವ್ಯವಸ್ಥೆಗಳು ಜಂಟಿಯಾಗಿ ತಪಾಸಣೆ ಕಾರ್ಯ ಕೈಗೊಳ್ಳಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.