ಕಾಸರಗೋಡು : ವಿಧಾನಸಭಾ ಚುನಾವಣೆ ಯನ್ನು ಪರಿಸರ ಸ್ನೇಹಿ ಚುನಾವಣೆಯನ್ನಾಗಿಸಲು ಜಿಲ್ಲಾಡಳಿತ ತೀರ್ಮಾನ
ಕಾಸರಗೋಡು, ಎ. 22 : ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಪರಿಸರ ಸ್ನೇಹಿ ಚುನಾವಣೆಯನ್ನಾಗಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಪರಿಸರಕ್ಕೆ ದೋಷವನ್ನುಂಟು ಮಾಡುವ ಫ್ಲೆಕ್ಸ್ , ಪ್ಲಾಸ್ಟಿಕ್ , ಡಿಸ್ಪೋಸಲ್ ವಸ್ತುಗಳು ಬದಲು ಮರುಬಳಕೆಗೆ ಸಾಧ್ಯವಿರುವ ಫ್ಲೆಕ್ಸ್ , ಪೇಪರ್ , ಮಡಲು , ಬಟ್ಟೆ ಮೊದಲಾದವುಗಳನ್ನು ಬಳಸುವಂತೆ ರಾಜಕೀಯ ಪಕ್ಷಗಳಿಗೆ ಮನವಿ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಇ.ದೇವದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚುನಾವಣೆಗೆ ಸಂಬಂಧಿಸಿ ಎಲ್ಲಾ ರೀತಿಯ ತರಬೇತಿ ನೀಡಲಾಗಿದೆ. ಮತಗಟ್ಟೆ ಗಳಲ್ಲಿ ಮತ್ತು ಇತರ ಕಡೆಗಳಲ್ಲಿ ಬಳಸುವ ತ್ಯಾಜ್ಯ ವಸ್ತುಗಳನ್ನು ಸಂಸ್ಕರಿಸಲು ಚುನಾವಣಾ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ಪರಿಸರ ಸ್ನೇಹಿ ಚುನಾವಣೆ ನಡೆಸಲು ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಲಾಗುವುದು. ಜಿಲ್ಲೆಯ ಎಲ್ಲಾ ಮತಗಟ್ಟೆ ಗಳಲ್ಲಿ ಇದಕ್ಕಾಗಿ ಹಸಿರು ಸ್ವಯಂ ಸೇವಕರನ್ನು ನೇಮಿಸಲಾಗುವುದು. ಆಯ್ದ ಮತಗಟ್ಟೆಗಳು ಮತ್ತು ಪರಿಸರದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲಾಗುವುದು. ಮತಗಟ್ಟೆಗಳಲ್ಲಿ ಊಟ ಸಹಿತ ಎಲ್ಲಾ ಚಟುವಟಿಕೆಗೆಗಳಿಗೆ ಪ್ಲಾಸ್ಟಿಕ್ , ಡಿಸ್ಪಸಲ್ ವಸ್ತುಗಳ ಬಳಕೆ ಬದಲು ಮರು ಬಳಸುವ ವಸ್ತುಗಳನ್ನು ಬಳಸಬೇಕಿದೆ. ಪರಿಸರ ಸ್ನೇಹಿ ಚುನಾವಣೆ ಬಗ್ಗೆ ತಿಳುವಳಿಕೆ ಮೂಡಿಸಲಾಗುವುದು. ಇದಕ್ಕಾಗಿ ವಿದ್ಯಾರ್ಥಿಗಳು , ಸಂಘ ಸಂಸ್ಥೆಗಳು , ಖಾಸಗಿ ಸಂಸ್ಥೆಗಳು , ರಾಜಕೀಯ ಪಕ್ಷಗಳು , ಸ್ಥಳೀಯಾಡಳಿತ ಸಂಸ್ಥೆಗಳು , ಕುಟುಂಬ ಶ್ರೀ ಕಾರ್ಯಕರ್ತರು ಮೊದಲಾದವರ ನೆರವು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚುನಾವಣೆಗೆ ಸಬಂಧಿಸಿದ ಕಛೇರಿಗಳು , ಪರಿಸರವನ್ನು ಜೀರೋ ವೇಸ್ಟ್ ಆಗಿ ಸಂರಕ್ಷಿಸಬೇಕು , ಡಿಸ್ಪೋಸಲ್ ಗ್ಲಾಸ್ , ಪ್ಲೇಟ್ , ಮಿನರಲ್ ಬಾಟಲಿ , ಆಹಾರ ಪ್ಯಾಕ್ ಮಾಡಿದ ಪ್ಲಾಸ್ಟಿಕ್ ಕವರ್ ಮೊದಲಾದವುಗಳನ್ನು ಕೈ ಬಿಡಬೇಕು , ಸ್ಟೀಲ್ ಗ್ಲಾಸ್ , ಸ್ಟೀಲ್ ಪ್ಲೇಟ್ ಮೊದಲಾದವುಗಳನ್ನು ಬಳಸಬೇಕು, ಪ್ರಚಾರಕ್ಕಾಗಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು ಎಂದು ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಯೋಜನೆಯ ಲಾಂಛನವನ್ನು ಜಿಲ್ಲಾಧಿಕಾರಿ ಬಿಡುಗಡೆ ಗೊಳಿಸಿದರು.
ಶುಚಿತ್ವ ಮಿಶನ್ ನ ಸಂಯೋಜಕ ಕೆ . ಪ್ರದೀಪ್ ಹಾಗೂ ವಾರ್ತಾ ಇಲಾಖೆ ಸಹಾಯಕ ಅಧಿಕಾರಿ ಮಧುಸೂದನ್ ಉಪಸ್ಥಿತರಿದ್ದರು.