ನೀರಿನ ವಿಚಾರದಲ್ಲಿ ಜಗಳ ವಿಧವೆಯ ಆತ್ಮಹತ್ಯೆಯಲ್ಲಿ ಪರ್ಯಾವಸಾನ
ಭೋಪಾಲ್ : ನಗರದಿಂದ ಸುಮಾರು 176 ಕಿ.ಮಿ. ದೂರವಿರುವ ಬರಗಾಲ ಪೀಡಿತ ಹರ್ದಾ ಜಿಲ್ಲೆಯ ಖಿರ್ಕಿಯಾ ತೆಹಸಿಲ್ಗ್ರಾಮದಲ್ಲಿ ನೀರಿನ ವಿಚಾರದಲ್ಲಿ 35 ವರ್ಷದ ವಿಧವೆ ಹಾಗೂ ಆಕೆಯ ನೆರೆಮನೆಯಾಕೆಯ ನಡುವೆ ನಡೆದ ಜಗಳ ವಿಧವೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡುಕೊಳ್ಳುವಲ್ಲಿ ಪರ್ಯವಸಾನಗೊಂಡ ಘಟನೆ ಬುಧವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನುಶ್ಯಾಮ ಮಲಿ(35) ಎಂದು ಗುರುತಿಸಲಾಗಿದೆ.
ಆ ಗ್ರಾಮದ ನಳ್ಳಿಗಳಲ್ಲಿ ಪ್ರತಿ ದಿನ ಬೆಳಿಗ್ಗೆ ಕೇವಲ ಅರ್ಧ ಗಂಟೆ ಮಾತ್ರ ನೀರು ಬರುತ್ತಿತ್ತೆನ್ನಲಾಗಿದ್ದು ಈ ಸಮಯ ಗ್ರಾಮದ ಮಹಿಳೆಯರೆಲ್ಲಾ ತಮ್ಮ ಕೊಡಗಳೊಂದಿಗೆ ನಾಮುಂದು ತಾಮುಂದು ಎಂದು ಕೊಡಗಳಲ್ಲಿ ನೀರು ತುಂಬುತ್ತಿದ್ದರು. ಹಿಂದೆ ಹಲವು ಬಾರಿ ನೀರಿಗೆಂದು ಬಂದು ಖಾಲಿ ಕೊಡದೊಂದಿಗೆ ಹಿಂದಿರುಗಿದ್ದ ಶ್ಯಾಮ ಬುಧವಾರದಂದು ತಾನು ನೀರು ಕೊಂಡು ಹೋಗುವುದಾಗಿ ಹಠ ತೊಟ್ಟಿದ್ದುಆಕೆಗೆ ನೀರು ತುಂಬಲು ಬಿಡದಿದ್ದಾಗ ಆಕೆ ಹಾಗೂ ನೆರೆಮನೆಯಾಕೆಯೊಂದಿಗೆ ನಡೆದ ಜಗಳ ತೀವ್ರ ಸ್ವರೂಪ ಪಡೆಯಿತು.
ಇದರಿಂದ ಬೇಸತ್ತ ಶ್ಯಾಮ ಸೀಮೆಎಣ್ಣೆ ಸುರಿದು ಆತ್ಮಹತ್ಯೆ ಮಾಡಿಕೊಂಡು ಬಿಟ್ಟಳು. ಆಕೆಯನ್ನು ಕೂಡಲೇ ಖಿರ್ಕಿಯಾ ಆಸ್ಪತ್ರೆಗೆ ಹಾಗೂ ನಂತರ ಹರ್ದಾ ಜಿಲ್ಲಾಸ್ಪತ್ರೆಗೆ ಸೇರಿಸಲಾಯಿತಾದರೂ ಆಕೆ ಅಲ್ಲಿ ಕೊನೆಯುಸಿರೆಳೆದಳು.
ಮಧ್ಯಪ್ರದೇಶ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಪತಿ ಎರಡು ವರ್ಷಗಳ ಹಿಂದೆ ವಿದ್ಯುತ್ ಆಘಾತಕ್ಕೆ ಸಿಲುಕಿ ಮೃತಪಟ್ಟದ್ದನು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಖಿರ್ಕಿಯಾ ಸಬ್ ಡಿವಿಷನಲ್ ಪೊಲೀಸ್ ಅಧಿಕಾರಿಗೆ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಹೇಳಲಾಗಿದೆ.