×
Ad

ಉಪ್ಪಿನಂಗಡಿ: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೀಡಿ ವರ್ಕರ್ಸ್‌ ಫೆಡರೇಶನ್‌ನ ವತಿಯಿಂದ ಪ್ರತಿಭಟನೆ

Update: 2016-04-22 16:46 IST

 ಉಪ್ಪಿನಂಗಡಿ: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ಗಾಂಧಿಪಾರ್ಕ್ ಬಳಿಯ ಸದರ್ನ್ ಇಂಡಿಯಾ ಬೀಡಿ ಕಂಪೆನಿಯ ಎದುರು ಶುಕ್ರವಾರ ಎಐಟಿಯುಸಿ ಸಂಯೋಜಿತ ಬೀಡಿ ವರ್ಕರ್ಸ್‌ ಫೆಡರೇಶನ್‌ನ ವತಿಯಿಂದ ಬೀಡಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರಕಾರ ಜಾರಿಗೊಳಿಸಿರುವ ಕೋಟ್ಪಾ ಕಾಯ್ದೆಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಹಾಗೂ ಈ ಕಾರಣಕ್ಕಾಗಿ ಈಗಾಗಲೇ ಮುಚ್ಚಿರುವ ಬೀಡಿ ಕಂಪೆನಿಗಳನ್ನು ತೆರೆದು ಬೀಡಿ ಕಾರ್ಮಿಕರಿಗೆ ಕೆಲಸ ನೀಡುವುದರೊಂದಿಗೆ ಕೆಲಸವಿಲ್ಲದ ದಿನಗಳ ವೇತನವನ್ನು ಬೀಡಿ ಕಾರ್ಮಿಕರಿಗೆ ಪಾವತಿಸುವಂತೆ ಒತ್ತಾಯಿಸಿದ ಬೀಡಿ ಕಾರ್ಮಿಕರು, ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಸುಮಾರು 10 ಲಕ್ಷಕ್ಕೂ ಮಿಕ್ಕಿ ಬೀಡಿ ಕಾರ್ಮಿಕರಿದ್ದು, ಕೋಟ್ಪಾ ಕಾಯಿದೆಯಿಂದಾಗಿ ಇವರಲ್ಲದೆ, ತಂಬಾಕು ಬೆಳೆಯುವ ರೈತರು, ಗಿಡದಿಂದ ಬೀಡಿ ಎಲೆ ಕತ್ತರಿಸುವ ಲಕ್ಷಾಂತರ ಮಂದಿ ಕಾರ್ಮಿಕರು, ಬೀಡಿ ಕೈಗಾರಿಕೆಯಲ್ಲಿ ದುಡಿಯುವವರು ಸೇರಿದಂತೆ ಹಲವು ಲಕ್ಷ ಮಂದಿ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುವಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ಬೀಡಿ ಕಾರ್ಮಿಕರಿಗೆ ನೀಡುತ್ತಿದ್ದ ತುಟ್ಟಿಭತ್ತೆಯನ್ನು ಕಳೆದ ಒಂದು ವರ್ಷದಿಂದ ನೀಡದಂತೆ ರಾಜ್ಯ ಸರಕಾರ ತೀರ್ಮಾನ ತೆಗೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಬೀಡಿ ಕಾರ್ಮಿಕರ ಪಾಲಿಗೆ ಮಾರಕವಾಗಿರುವ ಕೋಟ್ಪಾ ಕಾಯಿದೆಯನ್ನು ತಕ್ಷಣ ಹಿಂಪಡೆಯಬೇಕು. ಈಗಾಗಲೇ ಮುಚ್ಚಿರುವ ಬೀಡಿ ಕಂಪೆನಿಗಳನ್ನು ಆರಂಭಿಸಿ ಕಾರ್ಮಿಕರಿಗೆ ಕೆಲಸ ನೀಡುವುದರೊಂದಿಗೆ ಕೆಲಸವಿಲ್ಲದ ದಿನಗಳ ವೇತನವನ್ನೂ ಪಾವತಿಸಬೇಕು ಎಂದು ಆಗ್ರಹಿಸಿದರು.
.ಐ.ಟಿ.ಯು.ಸಿ. ಸಂಘಟನೆಯ ದ.ಕ. ಜಿಲ್ಲಾ ಸಮಿತಿ ಉಪಾಧ್ಯಕ್ಷ ಬಿ. ಶೇಖರ್ ಮಾತನಾಡಿ, ಬೀಡಿ ಉದ್ಯಮವನ್ನು ನಂಬಿರುವ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ, ತಕ್ಷಣ ಕಾಯ್ದೆ ಹಿಂದಕ್ಕೆ ಪಡೆದುಕೊಳ್ಳಬೇಕು, ಇಲ್ಲದಿದ್ದಲ್ಲಿ ಈ ಕಾರ್ಮಿಕರಿಗೆ ಬದಲಿ ಕೆಲಸದ ವ್ಯವಸ್ಥೆ ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಪುತ್ತೂರು ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಪಿ. ರಾಮಣ್ಣ ರೈ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ, ಬಡ ಕಾರ್ಮಿಕರ ವಿರುದ್ಧದ ಕಾನೂನು ಜಾರಿ ಮಾಡುತ್ತದೆ, ಆದರೆ ಜನಸಾಮಾನ್ಯರಿಗೆ ಮಾರಕ ಆಗುವ, ಶ್ರೀಮಂತ ಕೈಗಾರಿಕೆಗಳಿಗೆ ಅನುಕೂಲ ಆಗುವ ಕಾಯ್ದೆಗಳ ಬಗ್ಗೆ ಯಾವುದೇ ಕ್ರಮಕೈಗೊಳ್ಳದೆ ಬಡ ಕಾರ್ಮಿಕರಿಗೆ ಅನ್ಯಾಯ ಎಸಗುತ್ತಿದೆ, ಇದು ನಿಲ್ಲಬೇಕು ಎಂದರು.

ಹೆದ್ದಾರಿಯಲ್ಲಿ ಮೆರವಣಿಗೆ:  ಪ್ರತಿಭಟನಾ ಸಭೆಗೆ ಮುನ್ನ ಪ್ರತಿಭಟನಾಕಾರರು ಉಪ್ಪಿನಂಗಡಿ ಬಸ್ ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆಯಾಗಿ ಗಾಂಧಿಪಾರ್ಕ್ ತನಕ ಮೆರವಣಿಗೆ ನಡೆಸಿದರು.  ಪ್ರತಿಭಟನೆಯಲ್ಲಿ ಪುತ್ತೂರು ತಾಲೂಕು ಸಮಿತಿಯ ಸಹ ಕಾರ್ಯದರ್ಶಿ ಶ್ರೀಮತಿ ತಾರಾ, ಸದಸ್ಯರುಗಳಾದ ಕೇಶವ ಗೋಳಿಯಡ್ಕ, ನಿತ್ಯಾನಂದ, ಶ್ರೀಮತಿ ವಿಮಲ, ಶ್ರೀಮತಿ ವಾರಿಜಾ, ಬೀಡಿ ಗುತ್ತಿಗೆದಾರರಾದ ಮಹಮ್ಮದ್ ತೆಕ್ಕಾರು, ಎಂ.ಪಿ. ಉಮ್ಮರ್ ತೆಕ್ಕಾರು, ದಯಾನಂದ ತೆಕ್ಕಾರು, ಇಬ್ರಾಹಿಂ ಗೋಳಿತೊಟ್ಟು ಉಪಸ್ಥಿತರಿದ್ದರು. ಎಐಟಿಯುಸಿ ಸಂಘಟನೆ ಜೊತೆ ಕಾರ್ಯದರ್ಶಿ ರಮೇಶ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News