ಉಂಡೂ ಹೋದ ಕೊಂಡೂ ಹೋದ ಬಡ ಸಂಸದ ವಿಜಯ ಮಲ್ಯ
ಲಕ್ನೋ,ಎ.22: ಮದ್ಯದ ದೊರೆ ವಿಜಯ ಮಲ್ಯ ಬಿಲಿಯಾಧಿಪತಿಯಾಗಿದ್ದಿರಬಹುದು. ಆದರೆ ರಾಜ್ಯಸಭಾ ಸದಸ್ಯನಾಗಿ ತನಗೆ ದೊರೆಯಬೇಕಾಗಿದ್ದ ಸೌಲಭ್ಯಗಳನ್ನು ಬಾಚಿಕೊಳ್ಳುವಲ್ಲಿ ಎಂದೂ ಹಿಂದೆ ಬಿದ್ದಿರಲಿಲ್ಲ. 20,000 ರೂ.ಗಳಷ್ಟು ಜುಜುಬಿ ಮೊತ್ತವನ್ನೂ ಅವರು ಬಿಟ್ಟಿರಲಿಲ್ಲ ಎನ್ನುವುದನ್ನು ಆರ್‌ಟಿಐ ವಿಚಾರಣೆಯು ಬಹಿರಂಗಗೊಳಿಸಿದೆ.
ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ದೋಷಿಯೆಂದು ನ್ಯಾಯಾಲಯದಿಂದ ಘೋಷಿಸಲ್ಪಟ್ಟಿರುವ ಮಲ್ಯ ಬ್ಯಾಂಕುಗಳಿಗೆ ಸುಮಾರು 9,000 ಕೋ.ರೂ.ಗಳ ಸಾಲವನ್ನು ಬಾಕಿಯಿರಿಸಿದ್ದಕ್ಕಾಗಿ ಜಾಮೀನು ರಹಿತ ವಾರಂಟ್ ಎದುರಿಸುತ್ತಿದ್ದಾರೆ. ಮಲ್ಯ ಸಂಸದನಾಗಿ ಪ್ರತಿ ತಿಂಗಳು 50,000 ರೂ.ವೇತನ ಮತ್ತು ಕ್ಷೇತ್ರ ಭತ್ತೆ, ದೂರವಾಣಿ ಭತ್ತೆಯಂತಹ ಎಲ್ಲ ಸೌಲಭ್ಯಗಳನ್ನು ಜೇಬಿಗಿಳಿಸಿಕೊಂಡಿದ್ದಾರೆ ಎಂದು ಬರೇಲಿಯ ಆರ್‌ಟಿಐ ಕಾರ್ಯಕರ್ತ ಮೊಹಮ್ಮದ್ ಖಾಲಿದ್ ಜೀಲಾನಿ ಅವರ ಅರ್ಜಿಗೆ ನೀಡಿರುವ ಉತ್ತರದಲ್ಲಿ ರಾಜ್ಯಸಭಾ ಸಚಿವಾಲಯವು ತಿಳಿಸಿದೆ.
ಮಲ್ಯ ಅವರು ವಿಲಾಸಿ ಬದುಕಿಗೆ ಖ್ಯಾತರಾಗಿದ್ದರು. ದೊರೆಯಂತೆ ಬಾಳುತ್ತಿದ್ದರು. ಹೀಗಾಗಿ ಆರ್‌ಟಿಐ ಉತ್ತರವು ತನ್ನನ್ನು ದಿಗ್ಮೂಢಗೊಳಿಸಿದೆ ಎಂದು ಜೀಲಾನಿ ಸುದ್ದಿಸಂಸ್ಥೆಗೆ ತಿಳಿಸಿದರು.
ಅಂದ ಹಾಗೆ ಮಲ್ಯ ವಿಮಾನಯಾನ ಭತ್ತೆಗಳನ್ನು ಪಡೆದುಕೊಂಡಿಲ್ಲ. ಆದರೆ ರಾಜ್ಯಸಭಾ ಸದಸ್ಯನಾಗಿ ಇತರ ಎಲ್ಲ ಮೇಲು ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ ಎಂದು ಸಚಿವಾಲಯವು ತಿಳಿಸಿದೆ.
50,000 ರೂ.ವೇತನದ ಜೊತೆಗೆ 2010,ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಪ್ರತಿ ತಿಂಗಳು ಕ್ಷೇತ್ರ ಭತ್ತೆಯಾಗಿ 20,000 ರೂ.ಪಡೆದಿರುವ ಮಲ್ಯ ಅದರ ಬಳಿಕ 45,000 ರೂ.ಗೆ ಏರಿಕೆಯಾಗಿದ್ದ ಈ ಭತ್ತೆಯನ್ನು ಪ್ರತಿ ತಿಂಗಳೂ ಪಡೆದುಕೊಂಡಿದ್ದಾರೆ. ಇದೇ ಅವಧಿಯಲ್ಲಿ ಕಚೇರಿ ವೆಚ್ಚವಾಗಿ ಪ್ರತಿ ತಿಂಗಳಿಗೆ 6,000 ರೂ. ಮತ್ತು ನಂತರ ಪ್ರತಿ ತಿಂಗಳಿಗೆ 15,000 ರೂ.ಗಳನ್ನು ಜೇಬಿಗಿಳಿಸಿದ್ದಾರೆ.
ತನ್ನ ಅಧಿಕೃತ ದೂರವಾಣಿಯಿಂದ ಕರೆಗಳ ಶುಲ್ಕವಾಗಿ 1.73 ಲ.ರೂ.ಅವರಿಗೆ ಪಾವತಿಯಾಗಿದೆ. ರಾಜ್ಯಸಭಾ ಸದಸ್ಯರಿಗೆ ಪ್ರತಿ ತಿಂಗಳು 50,000 ಸ್ಥಳೀಯ ಕರೆಗಳು ಉಚಿತವಾಗಿವೆ.
ಆದರೆ ನೀರು ಮತ್ತು ವಿದ್ಯುತ್ ಬಳಕೆ ಹಾಗೂ ವೈದ್ಯಕೀಯ ವೆಚ್ಚಗಳ ಯಾವುದೇ ಬಿಲ್‌ಗಳನ್ನು ಅವರು ಮರುಪಾವತಿಗೆ ಸಲ್ಲಿಸಿರಲಿಲ್ಲ.
ಮಲ್ಯ 2002ರಲ್ಲಿ ತನ್ನ ತವರು ರಾಜ್ಯ ಕರ್ನಾಟಕದಿಂದ ಕಾಂಗ್ರೆಸ್ ಮತ್ತು ಜೆಡಿಯು ಬೆಂಬಲದೊಂದಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2010ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲದೊಂದಿಗೆ ರಾಜ್ಯಸಭೆಗೆ ಪುನರಾಯ್ಕೆಯಾಗಿರುವ ಅವರ ಸದಸ್ಯತ್ವ ಮುಂಬರುವ ಜುಲೈನಲ್ಲಿ ಅಂತ್ಯಗೊಳ್ಳಲಿದೆ.