×
Ad

2050ರ ವೇಳೆಗೆ ಆಮದು ನೀರೇ ಗತಿ!?

Update: 2016-04-22 18:08 IST

ಮುಂಬೈ,ಎ.22: ಅಂತರ್ಜಲ ದಾಸ್ತಾನು ದಿನೇದಿನೇ ಕುಸಿಯುತ್ತಿದ್ದು, 2050ರ ವೇಳೆಗೆ ತಲಾ ವ್ಯಕ್ತಿಗೆ ದಿನವೊಂದಕ್ಕೆ ಲಭ್ಯವಾಗುವ ನೀರಿನ ಪ್ರಮಾಣ 3,120 ಲೀ.ಗೆ ಇಳಿಕೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಆಗ ದೇಶವು ಕುಡಿಯುವ ನೀರನ್ನು ಆಮದು ಮಾಡಿಕೊಳ್ಳುವ ಅನಿವಾರ್ಯತೆಗೊಳಗಾದರೆ ಆಶ್ಚರ್ಯ ಪಡಬೇಕಾಗಿಲ್ಲ.

2001ರ ಅಂಕಿಅಂಶಗಳನ್ನು ಪರಿಗಣಿಸಿದರೆ ಇಂದು ದೇಶದಲ್ಲಿ ದಿನವೊಂದಕ್ಕೆ ತಲಾ ವ್ಯಕ್ತಿಗೆ ಅಂತರ್ಜಲ ಲಭ್ಯತೆಯು 5,120 ಲೀ.ಗೆ ಇಳಿದಿದ್ದು, ಇದು 1951ರಲ್ಲಿ ಲಭ್ಯವಿದ್ದ 14,180 ಲೀ.ನ ಶೇ.35ರಷ್ಟಾಗಿದೆ. 1991ರಲ್ಲಿ ದೇಶದಲ್ಲಿ ಅಂತರ್ಜಲ ಪ್ರಮಾಣ 1951ರ ದಾಸ್ತಾನಿನ ಅರ್ಧದಷ್ಟೂ ಇರಲಿಲ್ಲ. 2025ರ ವೇಳೆಗೆ ದಿನವೊಂದಕ್ಕೆ ತಲಾ ವ್ಯಕ್ತಿಗೆ ನೀರಿನ ಲಭ್ಯತೆಯು ಮೂಲವರ್ಷದ ಶೇ.25ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಅಂತರ್ಜಲದ ಈಗಿನ ಬಳಕೆಯ ಪ್ರಮಾಣದ ಆಧಾರದಲ್ಲಿ 2050ರ ವೇಳೆಗೆ ಇದು ಶೇ.22ಕ್ಕೆ ಇಳಿಯಬಹುದು ಎಂದು ಕೇಂದ್ರ ಅಂತರ್ಜಲ ಮಂಡಳಿ(ಸಿಜಿಡಬ್ಲೂಬಿ)ಯ ಅಧ್ಯಯನವು ಎಚ್ಚರಿಕೆ ನೀಡಿದೆ.

ಕೆರೆ-ಸರೋವರಗಳು ಮತ್ತು ಬಾವಿಗಳಲ್ಲಿ ಮಳೆನೀರಿನ ಕೊಯ್ಲು ಕಣ್ಮರೆಯಾಗುತ್ತಿರುವುದು, ಅಂತರ್ಜಲದ ಬಗ್ಗೆ ಅರಿವಿನ ಕೊರತೆ ಮತ್ತು ಕಡಿಮೆಯಾಗುತ್ತಿರುವ ಹಸಿರು ಪರಿಸರ ಇವೆಲ್ಲ ನಮ್ಮ ಕಾಲ ಕೆಳಗಿನ ನೆಲದ ಒಡಲಲ್ಲಿಯ ನೀರಿನ ಮಟ್ಟ ತಗ್ಗುತ್ತಿರುವುದಕ್ಕೆ ಪ್ರಮುಖ ಕಾರಣಗಳಾಗಿವೆ.

ಕ್ಷಿಪ್ರ ಅಭಿವೃದ್ಧಿ ಮತ್ತು ವಿವಿಧ ಉದ್ದೇಶಗಳಿಗೆ ಅಂತರ್ಜಲದ ಬಳಕೆಯು ನೀರಾವರಿಯಾಶ್ರಿತ ಕೃಷಿಯ ವಿಸ್ತರಣೆ, ಒಟ್ಟಾರೆ ಆರ್ಥಿಕ ಬೆಳವಣಿಗೆ ಮತ್ತು ನಗರ ಪ್ರದೇಶದಲ್ಲಿ ಜೀವನಮಟ್ಟ ಸುಧಾರಣೆಗೆ ಕೊಡುಗೆಯನ್ನು ನೀಡಿದೆಯಾದರೂ, ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಹಾಗೂ ನೀರಾವರಿಗೆ ಅಗತ್ಯ ನೀರಿನ ಪ್ರಮುಖ ಮೂಲವಾಗಿರುವ ಅಂತರ್ಜಲದ ಪ್ರಮಾಣವು ತ್ವರಿತವಾಗಿ ಬರಿದಾಗುತ್ತಿದೆ ಎಂದು ಸಿಜಿಡಬ್ಲೂಬಿ ಅಂತರ್ಜಲವನ್ನು ಕೃತಕವಾಗಿ ಮರುಪೂರಣ ಮಾಡುವ ಕುರಿತ ತನ್ನ ಮಾಸ್ಟರ್ ಪ್ಲಾನ್‌ನಲ್ಲಿ ಹೇಳಿದೆ.

ತ್ವರಿತವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅದರ ಹೆಚ್ಚುತ್ತಿರುವ ಬೇಡಿಕೆಗಳನ್ನು ಪರಿಗಣಿಸಿದರೆ ತಲಾ ವ್ಯಕ್ತಿಗೆ ನೀರಿನ ಲಭ್ಯತೆ ವಾಸ್ತವ ಬಳಕೆಯ ಪ್ರಮಾಣದಷ್ಟೇ ಆಗುವ ದಿನಗಳು ದೂರವಿಲ್ಲವೇನೋ...?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News