ಐಫೋನ್ ತೆರೆಯಲು 8.65 ಕೋಟಿ ರೂ. ನೀಡಿದ ಎಫ್‌ಬಿಐ
Update: 2016-04-22 20:28 IST
ವಾಶಿಂಗ್ಟನ್, ಎ. 22: ಬರ್ನಾಡಿನೊ ದಾಳಿಕೋರರ ಪೈಕಿ ಓರ್ವನ ಐಫೋನನ್ನು ತೆರೆಯಲು ಹ್ಯಾಕರ್‌ಗಳಿಗೆ ಸುಮಾರು 1.3 ಮಿಲಿಯ ಡಾಲರ್ (ಸುಮಾರು 8.65 ಕೋಟಿ ರೂಪಾಯಿ) ಹಣವನ್ನು ಎಫ್‌ಬಿಐ ನೀಡಿರುವುದಾಗಿ ಅದರ ನಿರ್ದೇಶಕ ಜೇಮ್ಸ್ ಕಾಮಿ ಗುರುವಾರ ಸೂಚನೆ ನೀಡಿದ್ದಾರೆ.
ಲಂಡನ್‌ನಲ್ಲಿ ಆ್ಯಸ್ಪನ್ ಇನ್‌ಸ್ಟಿಟ್ಯೂಟ್ ಏರ್ಪಡಿಸಿದ ಸಭೆಯೊಂದರಲ್ಲಿ ಮಾತನಾಡಿದ ಕಾಮಿ, ಹ್ಯಾಕರ್‌ಗಳಿಗೆ ನೀಡಲಾದ ನಿಖರವಾದ ಮೊತ್ತವನ್ನು ಬಹಿರಂಗಪಡಿಸಿಲ್ಲ. ಫೋನನ್ನು ತೆರೆಯಲು ತುಂಬಾ ಖರ್ಚು ಮಾಡಬೇಕಾಯಿತು ಎಂದಷ್ಟೆ ಹೇಳಿದರು.
‘‘ನಾನು ನನ್ನ ಈ ಹುದ್ದೆಯಲ್ಲಿ ಇನ್ನು ಏಳು ವರ್ಷ ಮತ್ತು ನಾಲ್ಕು ತಿಂಗಳು ಇರುತ್ತೇನೆ. ಈ ಅವಧಿಯಲ್ಲಿ ನಾನು ಗಳಿಸುವ ಸಂಬಳಕ್ಕಿಂತಲೂ ಹೆಚ್ಚು ಮೊತ್ತವನ್ನು ಹ್ಯಾಕರ್‌ಗಳಿಗೆ ಪಾವತಿಸಲಾಗಿದೆ’’ ಎಂದರು.
ಇದರ ಆಧಾರದಲ್ಲಿ ಎಫ್‌ಬಿಐ ಹ್ಯಾಕರ್‌ಗಳಿಗೆ ಕನಿಷ್ಠ 1.3 ಮಿಲಿಯ ಡಾಲರ್ ಪಾವತಿಸಿದೆ ಎಂದು ಲೆಕ್ಕಹಾಕಲಾಗಿದೆ.