ನೀರು ಪೋಲು ವಿವಾದದ ಸುಳಿಯಲ್ಲಿ ಹರ್ಯಾಣದ ಮುಖ್ಯಮಂತ್ರಿ ಖಟ್ಟರ್
ಚಂಡಿಗಡ, ಎ.22: ರಾಜ್ಯವು ನೀರಿನ ಅಭಾವವನ್ನು ಎದುರಿಸುತ್ತಿರುವಾಗ ಹೆಲಿಪ್ಯಾಡ್‌ಗಾಗಿ ಸುಮಾರು ಸಾವಿರ ಲೀಟರ್ ನೀರನ್ನು ಪೋಲುಮಾಡಿದ ವಿವಾದವೊಂದರಲ್ಲಿ ಹರ್ಯಾಣದ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಸಿಲುಕಿದ್ದಾರೆ. ಬುಧವಾರ ಯಮುನಾನಗರದಲ್ಲಿ ಖಟ್ಟರ್‌ರ ಹೆಲಿಕಾಪ್ಟರ್‌ಗಾಗಿ ಇಳಿದಾಣವನ್ನು ನಿರ್ಮಿಸಲು ಸುಮಾರು ಒಂದು ಸಾವಿರ ಲೀ.ನೀರನ್ನು ಬಳಸಲಾಗಿದೆಯೆಂದು ಹೇಳಲಾಗಿದೆ.
ಆದಾಗ್ಯೂ, ಮಾಧ್ಯಮಗಳ ವಿಭಾಗವೊಂದರಲ್ಲಿ ವರದಿಯಾಗಿರುವಂತೆ ನೀರಿನ ದುಂದು ವೆಚ್ಚ ನಡೆದಿಲ್ಲ. ಹೆಲಿಕಾಪ್ಟರ್ ಸುಗಮವಾಗಿ ಇಳಿಯಲು ಅಗತ್ಯವಿರುವಷ್ಟೇ ನೀರನ್ನು ಬಳಸಲಾಗಿದೆಯೆಂದು ಯಮುನಾನಗರದ ಜಿಲ್ಲಾಧಿಕಾರಿ ಎಸ್.ಎಸ್.ಫುಲಿಯಾ ತಿಳಿಸಿದ್ದಾರೆ.
ದೇಶಾದ್ಯಂತದ ಅನೇಕ ಜಿಲ್ಲೆಗಳು ಬರ ಪರಿಸ್ಥಿತಿಯನ್ನೆದುರಿಸುತ್ತಿರುವಾಗ ಹರ್ಯಾಣದ ಅನೇಕ ಕಡೆಗಳಲ್ಲಿ ನೀರು ತೀವ್ರ ಅಭಾವವಿರುವಾಗ ಹೆಲಿಪ್ಯಾಡ್ ನಿರ್ಮಿಸಲು ಭಾರೀ ನೀರಿನ ಪೋಲಾಗುವುದನ್ನು ನಿವಾರಿಸಬಹುದಿತ್ತೆಂದು ಕಾಂಗ್ರೆಸ್ ಹೇಳಿದೆ.
ತಾನಿಂದು ಸಿರ್ಸಾದ ಜಿಲ್ಲಾಧಿಕಾರಿಯನ್ನು ಭೇಟಿಯಾಗಿದ್ದೆ. ರಾಜಸ್ಥಾನದ ಗಡಿಯಲ್ಲಿರುವ ಸಿರ್ಸಾ ಜಿಲ್ಲೆಯ ಹಲವೆಡೆ ಸ್ವಚ್ಛ ನೀರು ಸಿಗುತ್ತಿಲ್ಲವೆಂದು ಹರ್ಯಾಣ ಕಾಂಗ್ರೆಸ್‌ನ ಅಧ್ಯಕ್ಷ ಅಶೋಕ್ ತನ್ವರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಖಟ್ಟರ್ ಅನೇಕ ಸ್ಥಳಗಳಿಗೆ ಹೀಗೆಯೇ ಭೇಟಿ ನೀಡಿದರೆ ಅದರ ಸಿದ್ಧತೆಗಾಗಿ ಎಷ್ಟು ನೀರು ಖರ್ಚಾಗಬಹುದು, ಯೋಚಿಸಿ ಎಂದವರು ಹೇಳಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮಂಗಳವಾರ ಲಲಿತಪುರಕ್ಕೆ ಭೇಟಿ ನೀಡಿದ್ದ ವೇಳೆ, ಧೂಳು ಮುಕ್ತ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣಕ್ಕಾಗಿ ಸಾವಿರಾರು ಲೀ. ನೀರು ವ್ಯರ್ಥ ಮಾಡಿದ್ದ ವಿವಾದಕ್ಕೆ ಸಿಲುಕಿದ್ದುದನ್ನು ಇಲ್ಲಿ ಜ್ಞಾಪಿಸಬಹುದು.
ಈ ಹಿಂದೆ, ಮಹಾರಾಷ್ಟ್ರದ ಸಚಿವ ಏಕನಾಥ ಖಡ್ಲೆ, ಬರ ಪೀಡಿತ ಲಾತೂರ್‌ಗೆ ಭೇಟಿ ನೀಡಿದ್ದ ವೇಳೆ ಹೆಲಿಪ್ಯಾಡ್ ನಿರ್ಮಾಣಕ್ಕೆ 10 ಸಾವಿರ ಲೀ. ನೀರು ಬಳಸಿ ವಿವಾದಕ್ಕೀಡಾಗಿದ್ದರು.