×
Ad

ಚುಟುಕು ಸುದ್ದಿಗಳು

Update: 2016-04-22 23:37 IST


ರೈತರ ಮಕ್ಕಳಿಗೆ ತರಬೇತಿ ಶಿಬಿರ
ಉಡುಪಿ, ಎ.22: ತೋಟಗಾರಿಕಾ ಇಲಾಖೆಯ ತೋಟಗಾರಿಕೆ ತರಬೇತಿ ಕೇಂದ್ರ ಮೂಡಿಗೆರೆ, ಚಿಕ್ಕಮಗಳೂರು ತರಬೇತಿ ಕೇಂದ್ರಗಳಲ್ಲಿ ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ ಹಮ್ಮಿಕೊಳ್ಳಲಾಗಿದೆ. ತರಬೇತಿ ಅವಧಿ ಮೇ2ರಿಂದ 2017ರ ಫೆ.28ರವರೆಗೆ ಇರುತ್ತದೆ. ಅಭ್ಯರ್ಥಿಗಳು ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷಗಳ ಮಿತಿಯಿದೆ. ಅಭ್ಯರ್ಥಿಯ ತಂದೆ/ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿದ್ದು, ಸ್ವಂತ ಸಾಗುವಳಿ ಮಾಡುತ್ತಿರಬೇಕು. ಅರ್ಜಿಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಉಡುಪಿ, ಕುಂದಾಪುರ ಮತ್ತು ಕಾರ್ಕಳ ಕಚೇರಿಗಳಲ್ಲಿ ವಿತರಿಸಲಾಗುತ್ತದೆ. ಅರ್ಜಿ ಸ್ವೀಕರಿಸಲು ಎ.25 ಕೊನೆಯ ದಿನವಾಗಿದ್ದು, ಎ.28ರಂದು ಸಂದರ್ಶನ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 1,000ರೂ.ಗಳ ಮಾಸಿಕ ಶಿಷ್ಯ ವೇತನ ನೀಡಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ-1, ಇತರೆ 6 ಹೀಗೆ ಒಟ್ಟು 7 ಅಭ್ಯರ್ಥಿಗಳನ್ನು ತರಬೇತಿಗಾಗಿ ಆಯ್ಕೆ ಮಾಡಲು ಅವಕಾಶವಿದೆ ಎಂದು ತೋಟಗಾರಿಕಾ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.


ಉಡುಪಿ: ಇಂದಿನಿಂದ ಆನಂದೋತ್ಸವ
ಉಡುಪಿ, ಎ.22: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ರಂಗಭೂಮಿಯು, ನಟ ಸಂಘಟಕ, ರಂಗಭೂಮಿಯನ್ನು 45 ವರ್ಷಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ದಿ.ಕುತ್ಪಾಡಿ ಆನಂದ ಗಾಣಿಗರ ಸಂಸ್ಮರಣೆಯಲ್ಲಿ ಎ.23 ಮತ್ತು 24ರಂದು 5ನೆ ವರ್ಷದ ಆನಂದೋತ್ಸವವನ್ನು ಆಚರಿಸಲಿದೆ.

ಆನಂದೋತ್ಸವವನ್ನು ಎ.23ರ ಸಂಜೆ 6ಕ್ಕೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಿವೃತ್ತ ಪತ್ರಕರ್ತ ಎನ್.ಗುರುರಾಜ್ ಅಧ್ಯಕ್ಷತೆಯಲ್ಲಿ ಸಂಗೀತ ಕಲಾನಿಧಿ ಕೆ.ರಾಘವೇಂದ್ರ ಭಟ್ ಉದ್ಘಾಟಿಸುವರು. ಸಾಧು ಸಾಲಿಯಾನ್, ಸತೀಶ್ ಪೂಜಾರಿ, ಜಗನ್ನಾಥ ಗಾಣಿಗ ಅತಿಥಿಗಳಾಗಿ ಭಾಗವಹಿಸುವರು. ಎ.24ರಂದು ಅಂಬಾತನಯ ಮುದ್ರಾಡಿ ಅಧ್ಯಕ್ಷತೆಯಲ್ಲಿ ಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಮೀನಾಕ್ಷಿ ಮಾಧವ, ಕೆ.ಜೆ.ಗಾಣಿಗ, ಯಶ್‌ಪಾಲ್ ಸುವರ್ಣ ಅತಿಥಿಗಳಾಗಿರುವರು.
ಸಭಾ ಕಾರ್ಯಕ್ರಮದ ಬಳಿಕ 23ರಂದು ‘ಟ್ವೆಲ್ತ್ ನೈಟ್’ ಹಾಗೂ 24 ರಂದು ‘ರಕ್ತವರ್ಣೆ’ ನಾಟಕದ ಪ್ರದರ್ಶನವಿದೆ. ಈ ಎರಡೂ ನಾಟಕಗಳನ್ನು ದಾಕ್ಷಾಯಿನಿ ಭಟ್ ನಿರ್ದೇಶನದಲ್ಲಿ ಬೆಂಗಳೂರಿನ ದೃಶ್ಯತಂಡ ಪ್ರದರ್ಶಿಸಲಿದೆ. ಆನಂದೋತ್ಸವಕ್ಕೆ ಪ್ರವೇಶ ಉಚಿತ ಎಂದು ರಂಗಭೂಮಿ ಪ್ರಕಟನೆ ತಿಳಿಸಿದೆ.


ಕಾರ್ಕಳ: ಇಂದಿನಿಂದ ಮಂತ್ರಪಠಣ
ಕಾರ್ಕಳ, ಎ.22: ಕಾರ್ಕಳದ ದಾನಶಾಲೆ ಶ್ರೀಜೈನಮಠದ ಸ್ವಸ್ತಿಶ್ರೀ ಲಲಿತಾಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯ ನೇತೃತ್ವದಲ್ಲಿ ಆನೆಕೆರೆ ಚತುರ್ಮುಖ ಕೆರೆ ಬಸದಿಯ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಊರ ಹಾಗೂ ಪರವೂರ ಜೈನ ಸಮಾಜ ಬಾಂಧವರ ಕೂಡುವಿಕೆಯಿಂದ ತೃತೀಯ ವರ್ಷದ ಅಖಂಡ ಪಂಚಣಮೋಕಾರ ಮಂತ್ರಪಠಣವು ಎ.23ರ ಬೆಳಗ್ಗೆ 6 ಗಂಟೆಯಿಂದ ಎ.24ರಂದು ಬೆಳಗ್ಗೆ 6 ಗಂಟೆವರೆಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಎ.26: ರಜತ ಪ್ರಭಾವಳಿ ಸಮರ್ಪಣೆ
ಕಾರ್ಕಳ, ಎ.22: ಕಾರ್ಕಳದ ಕುಂಟಲ್ಪಾಡಿ ಬೈಲಡ್ಕ ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದಲ್ಲಿ ಶ್ರೀ ದೇವಿಯ ವಾರ್ಷಿಕ ಜಾತ್ರೆ, ಶ್ರೀದೇವಿಗೆ ರಜತ ಪ್ರಭಾವಳಿ ಸಮರ್ಪಣೆ, ಪ್ರತಿಷ್ಠಾ ವರ್ಧಂತಿ ಹಾಗೂ ಚಂಡಿಕಾ ಹೋಮವು ಎ.26ಂದು ಬೆಳಗ್ಗೆ 7 ಗಂಟೆಯಿಂದ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಯುವಕನಿಗೆ ಹಲ್ಲೆ: ದೂರು
ಮಂಜೇಶ್ವರ, ಎ.22: ಪೊಯ್ಯತ್ತಬೈಲು ನಿವಾಸಿ ತಿಮ್ಮಪ್ಪಸಫಲ್ಯ ಎಂಬವರ ಪುತ್ರ ಪ್ರಕಾಶ್(42)ರ ಮೇಲೆ ತಂಡವೊಂದು ಹಲ್ಲೆಗೈದು ಕೊಲೆ ಬೆದರಿಕೆಯೊಡ್ಡಿರುವುದಾಗಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ. 7 ಮಂದಿಯ ತಂಡ ಹಲ್ಲೆ ಮಾಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮನೆಗೆ ಕಲ್ಲೆಸೆತ: ಹಾನಿ ಮಂಜೇಶ್ವರ, ಎ.22: ಮೊರತ್ತಣೆಯ ದಿ.ಶೇಖರ್ ಎಂಬವರ ಪತ್ನಿ ಕುಸುಮಾ ಎಂಬವರ ಮನೆಗೆ ತಂಡವೊಂದು ಕಲ್ಲೆಸೆದು ಹಾನಿಗೊಳಿಸಿರುವ ಘಟನೆ ನಡೆದಿದೆ. ಕಲ್ಲೆಸೆತದಿಂದಾಗಿ ಮನೆಯ ಕಿಟಕಿ ಗಾಜು ಹಾನಿಗೀಡಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.

‘ಎತ್ತಿನಹೊಳೆ ಯೋಜನೆ ಜನಕ’ ಯಡಿಯೂರಪ್ಪ ವಿರುದ್ಧವೂ ಪ್ರತಿಭಟನೆ ನಡೆಸಲಿ: ಸಚಿವ ರೈ
ಮಂಗಳೂರು, ಎ.22: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ2011ರ ಫೆ.24ರಂದು ತಾನು ಮಂಡಿಸಿದ ಬಜೆಟ್‌ನಲ್ಲಿ ನೇತ್ರಾವತಿ ತಿರುವು ಯೋಜನೆ ಘೋಷಿಸಿ ಬೆನ್ನುತಟ್ಟಿಕೊಂಡಿದ್ದರು. ಎತ್ತಿನಹೊಳೆ ಯೋಜನೆಯ ಜನಕ ಯಡಿಯೂರಪ್ಪ ದ.ಕ.ಜಿಲ್ಲೆಗೆ ಆಗಮಿಸುವ ಸಂದರ್ಭದಲ್ಲಿ ಹೋರಾಟಗಾರರು ಖಾಲಿ ಕೊಡ, ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದು ಒಳ್ಳೆಯದು. ಆ ಮೂಲಕ ತಮ್ಮದು ರಾಜಕೀಯ ಪ್ರೇರಿತ ಹೋರಾಟವಲ್ಲ ಎಂದು ಸಾಬೀತುಪಡಿಸಲಿ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಹೋರಾಟಗಾರರ ಬಂಧನಕ್ಕೆ ಖಂಡನೆ
ಮಂಗಳೂರು, ಎ.22: ಎತ್ತಿನಹೊಳೆ ಯೋಜನೆ ವಿರೋಧಿಸಿ ಹೋರಾಟ ನಡೆಸು ತ್ತಿರುವ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ನಾಯಕರನ್ನು ಮುಖ್ಯಮಂತ್ರಿ ಆಗಮನದ ಮುನ್ನ ಪೊಲೀಸರು ಬಂಧಿಸಿದ ಕ್ರಮವನ್ನು ಸಂಸದ ನಳಿನ್‌ಕುಮಾರ್ ಕಟೀಲ್ ಖಂಡಿಸಿದ್ದಾರೆ. ಪೊಲೀಸ್ ಬಲ ಪ್ರಯೋಗಿಸಿ ಹೋರಾಟಗಾರರ ಹಕ್ಕು ಮೊಟಕುಗೊಳಿಸಲು ಯತ್ನಿಸಿದ್ದು ಪ್ರಜಾಪ್ರಭುತ್ವದ ಕೊಲೆಯಾಗಿದೆ. ಸರಕಾರದ ಈ ದಮನಕಾರಿ ನೀತಿಗೆ ಮುಂದಿನ ದಿನಗಳಲ್ಲಿ ಕರಾವಳಿಯ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಳನ್ನು ಶಾಲೆಗೆ ಕರೆತರುವ ಜನಾಂದೋಲನಕ್ಕಾಗಿ ಸಭೆ
 ಉಡುಪಿ, ಎ.22: ಮಕ್ಕಳ ಹಕ್ಕುಗಳ ರಕ್ಷಣೆಗೆ, ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ -2009ರ ಪರಿಣಾಮಕಾರಿ ಅನುಷ್ಠಾನಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿದ್ದು, ಈಗಾಗಲೇ ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ನ್ಯಾಯಾ ಧೀಶರ ಅಧ್ಯಕ್ಷತೆಯಲ್ಲಿ ಈ ಸಂಬಂಧ ಸಮಿತಿಯನ್ನು ರಚಿಸಲಾಗಿದ್ದು, ಅಪರ ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರನ್ನೊಳಗೊಂಡಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ವಾರ್ತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆಗಳು ಸಮಿತಿಯಲ್ಲಿವೆ.
ಜಿಲ್ಲೆಯಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಡುಪಿ ನ್ಯಾಯಾಲಯ ಸಭಾಂಗಣದಲ್ಲಿ ಪ್ರಮುಖ ಇಲಾ ಖಾಧಿಕಾರಿಗಳ ಸಭೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಶಂಕರ ಬಿ. ಅಮರಣ್ಣವರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಆಂದೋಲನದ ಬಗ್ಗೆ ಮಾಹಿತಿ ನೀಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರವಿ, ಶಿಕ್ಷಣ ಇಲಾಖೆ ದಾಖಲೆಗಳ ಪ್ರಕಾರ 54 ಶಾಲೆ ತೊರೆದ ಮಕ್ಕಳಿದ್ದಾರೆ. ಆದರೆ ಶಿಕ್ಷಣ ಇಲಾಖೆಯಿಂದಲೂ ಗುರುತಿಸಲ್ಪಡದ ಮಕ್ಕಳಿದ್ದು, ವಿವಿಧ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ಆಯೋಗ ಎಲ್ಲ ಇಲಾ ಖೆಗಳ ಜೊತೆಗೂಡಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನರ್‌ಸೇರ್ಪಡೆಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎಂದರು. ತಳಮಟ್ಟದಲ್ಲಿ ಜಾಗೃತಿ ಮೂಡಿಸಲು ಗ್ರಾಮ, ತಾಲೂಕು ಹಂತಗಳಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಇದಕ್ಕಾಗಿ ವಿವಿಧ ಸಂಘಟನೆಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುತ್ತದೆ. ಮಕ್ಕಳು ಶಾಲೆ ತೊರೆಯಲು ಕಾರಣವಾದ ಅಂಶಗಳನ್ನು ಪರಿಗಣಿಸಿ ಈ ಕುರಿತು ಅಧ್ಯಯನ ನಡೆಸಿ ಸಮಗ್ರ ಪರಿಹಾರ ಕಂಡುಕೊಳ್ಳಲು ಕ್ರಮಕೈಗೊಳ್ಳಲಾಗುವುದು ಎಂದು ವನಿತಾ ತೊರವಿ ಹೇಳಿದರು. ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹಾಗೂ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಹೊಳೆಯಲ್ಲಿ ಮುಳುಗಿದ ಮಕ್ಕಳ ರಕ್ಷಣೆ
ಮಂಜೇಶ್ವರ, ಎ.22: ಸ್ನಾನ ಮಾಡಲು ಹೊಳೆಗೆ ಇಳಿದು ನೀರಿನ ಸೆಳೆತಕ್ಕೆ ಸಿಲುಕಿದ ಸಹೋದರಿರಬ್ಬರನ್ನು ಯುವಕನೋರ್ವ ರಕ್ಷಿಸಿದ ಘಟನೆ ನಡೆದಿದೆ. ರಝಾಕ್ ಎಂಬವರ ಮಕ್ಕಳಾದ ಲುಬಿನಾ (10) ಮತ್ತು ಮುಹಮ್ಮದ್ ಶಾಮೀರ್(4) ಚೆರ್ವತ್ತೂರಿನ ಹೊಳೆಗೆ ಇಳಿದಿದ್ದು, ನೀರುಪಾಲಾಗುತ್ತಿದ್ದ ಮಕ್ಕಳನ್ನು ಸ್ಥಳೀಯ ನಿವಾಸಿ ಅರವಿಂದನ್(35) ಎಂಬವರು ನೀರಿನಿಂದ ಮೇಲಕ್ಕೆತ್ತಿ ರಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News