×
Ad

‘ತಾಯಿಂದ ಮನೆ ಕಾನೂನುಬದ್ಧವಾಗಿಯೇ ಖರೀದಿಸಿದ್ದು’

Update: 2016-04-22 23:59 IST

ಉಡುಪಿ, ಎ.22: ಕಡಿಯಾಳಿಯ ಸಾವಿತ್ರಿ ಭಟ್ ಅವರ ಮನೆಯನ್ನು ನಾನು ಕಾನೂನು ಬದ್ಧವಾಗಿಯೇ ಖರೀದಿಸಿದ್ದು ಇದರಲ್ಲಿ ಯಾವುದೇ ಮೋಸ ನಡೆದಿಲ್ಲ ಎಂದು ಸಾವಿತ್ರಿ ಭಟ್‌ರ ಮಗ ಕೇಶವ ಭಟ್ ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಸಾವಿತ್ರಿ ಭಟ್ ತನ್ನ 8 ಮಕ್ಕಳಿಗೆ ಜಾಗವನ್ನು ಪಾಲು ಮಾಡಿ ನೀಡಿದ್ದರು. ತಮ್ಮ ಪಾಲಿನ ಮನೆಯಲ್ಲಿ ಅವರು ತನ್ನ ಕೊನೆಯ ಮಗ ಕೃಷ್ಣ ಭಟ್ ಜೊತೆ ವಾಸವಾಗಿದ್ದರು. ಕೃಷ್ಣ ಭಟ್ ವ್ಯವಹಾರಕ್ಕಾಗಿ ಮನೆಯನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆದುಕೊಂಡಿದ್ದರು. ಅದನ್ನು ತೀರಿಸದ ಕಾರಣ ಬ್ಯಾಂಕಿನವರು ಮನೆಯನ್ನು ಏಲಂ ಹಾಕಲು ನಿರ್ಧರಿಸಿದ್ದರು. ಆಗ ಸಾವಿತ್ರಿ ಭಟ್‌ರ ಮೂರನೆ ಮಗ ಬ್ಯಾಂಕ್ ಬಾಕಿ ಪಾವತಿಸಿದ್ದರು. ನಂತರ ನಾನು ಶ್ರೀಪತಿ ಭಟ್‌ಗೆ ಹಣ ನೀಡಿ ಆ ಮನೆಯನ್ನು ಖರೀದಿಸಿದ್ದೆ. ಆದರೆ ನಾನು ಮೋಸದಿಂದ ತಾಯಿಯ ಆಸ್ತಿಯನ್ನು ನನ್ನ ಹೆಸರಿಗೆ ಮಾಡಿಕೊಂಡು ತಾಯಿಗೆ ಹಿಂಸೆ ನೀಡುವುದಾಗಿ ಎಸಿ ಕೋರ್ಟ್‌ಗೆ ದೂರು ನೀಡಲಾಯಿತು. ಇದೆಲ್ಲ ಸತ್ಯಕ್ಕೆ ದೂರವಾದುದು.

ಎಸಿ ಕೋರ್ಟ್‌ನಲ್ಲಿ ನಮ್ಮ ವಾದಕ್ಕೆ ಬೆಲೆ ಕೊಡದೆ ತಾಯಿಯ ಹೆಸರಿಗೆ ಮನೆಯನ್ನು ವರ್ಗಾಯಿಸುವಂತೆ ಆದೇಶ ನೀಡಲಾಯಿತು. ಅದರಂತೆ 8-3-50 ನಂಬರಿನ ಮನೆಯನ್ನು ಬಿಟ್ಟುಕೊಟ್ಟು ಮಾಳಿಗೆಯ ಮೇಲೆ ಇರುವ 8-3-50ಎ ಮನೆಯಲ್ಲಿ ನಾನು ವಾಸ ಮಾಡಿಕೊಂಡಿದ್ದೇನೆ ಎಂದು ಅವರು ತಿಳಿಸಿದರು.

ಈಗ ನನ್ನನ್ನು ಆ ಮನೆಯಿಂದ ಓಡಿಸಿ ಸಂಪೂರ್ಣ ಮನೆಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಕೃಷ್ಣ ಭಟ್ ನನ್ನ ವಿರುದ್ಧ ದೂರುಗಳನ್ನು ದಾಖಲಿಸಿ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ. ಇವರಿಂದ ನಮಗೆ ರಕ್ಷಣೆ ಕೊಡಬೇಕು ಎಂದು ಅವರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕೇಶವ ಭಟ್‌ರ ಪತ್ನಿ ಶ್ರೀವಿದ್ಯಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News