ಹೈದರಾಬಾದ್‌ಗೆ ಇಂದು ಪಂಜಾಬ್ ಎದುರಾಳಿ

Update: 2016-04-22 18:39 GMT

ಹೈದರಾಬಾದ್, ಎ.22: ಸತತ ಗೆಲುವಿನೊಂದಿಗೆ ಗೆಲುವಿನ ಹಳಿಗೆ ಮರಳಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಶನಿವಾರ ಇಲ್ಲಿನ ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ ಟಿ-20 ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ.

ಸತತ ಎರಡು ಪಂದ್ಯಗಳಲ್ಲಿ ಸೋತ ನಂತರ ಎಚ್ಚೆತ್ತುಕೊಂಡಿರುವ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್(7 ವಿಕೆಟ್) ಹಾಗೂ ಗುಜರಾತ್ ಲಯನ್ಸ್ (10 ವಿಕೆಟ್) ವಿರುದ್ಧ ಭರ್ಜರಿ ಜಯ ಸಾಧಿಸಿ ಗೆಲುವಿನ ಲಯಕ್ಕೆ ಮರಳಿತ್ತು.

ಪ್ರಮುಖ ಆಟಗಾರರಾದ ಯುವರಾಜ್ ಸಿಂಗ್, ಆಶೀಷ್ ನೆಹ್ರಾ ಹಾಗೂ ಕೇನ್ ವಿಲಿಯಮ್ಸನ್ ಅನುಪಸ್ಥಿತಿಯ ಹೊರತಾಗಿಯೂ ಹೈದರಾಬಾದ್ ತಂಡ ಕಳೆದ ಎರಡು ಪಂದ್ಯಗಳಲ್ಲಿ ಸಂಘಟಿತ ಪ್ರದರ್ಶನ ನೀಡಿದೆ.

ಹೈದರಾಬಾದ್ ತಂಡದ ನಾಯಕ ಹಾಗೂ ಆಸ್ಟ್ರೇಲಿಯದ ಸ್ಫೋಟಕ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಪ್ರಸ್ತುತ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ವಾರ್ನರ್ ಗುರುವಾರ ನಡೆದ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಔಟಾಗದೆ 74 ರನ್ ಗಳಿಸಿದ್ದರು. ಮುಂಬೈ ವಿರುದ್ಧದ ಪಂದ್ಯದಲ್ಲಿ ಔಟಾಗದೆ 90 ರನ್ ಗಳಿಸಿದ್ದರು.

ಕಳೆದ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಇನ್ನೋರ್ವ ಆರಂಭಿಕ ಆಟಗಾರ ಶಿಖರ್ ಧವನ್ ಔಟಾಗದೆ 53 ರನ್ ಗಳಿಸಿ ಕೊನೆಗೂ ಫಾರ್ಮ್‌ಗೆ ಮರಳಿರುವುದು ಹೈದರಾಬಾದ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.

 ಹೈದರಾಬಾದ್‌ನ ಇನ್ನುಳಿದ ಆಟಗಾರರಾದ ಮೊಸಿಸ್ ಹೆನ್ರಿಕ್ಸ್,, ಇಯಾನ್ ಮೊರ್ಗನ್ ಹಾಗೂ ವಿಕೆಟ್‌ಕೀಪರ್-ದಾಂಡಿಗ ನಮನ್ ಓಜಾ ತಂಡಕ್ಕೆ ನಿರ್ಣಾಯಕ ಹಂತದಲ್ಲಿ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ.

ಹಿರಿಯ ಆಟಗಾರ ನೆಹ್ರಾ ಅನುಪಸ್ಥಿತಿಯಲ್ಲೂ ಹೈದರಾಬಾದ್ ಬೌಲರ್‌ಗಳು ಎದುರಾಳಿ ತಂಡಕ್ಕೆ ಸವಾಲಾಗಿ ಪರಿಣಮಿಸಿದ್ದಾರೆ. ವೇಗದ ಬೌಲರ್ ಭುವನೇಶ್ವರ ಕುಮಾರ್ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಆರಂಭಿಕ ದಾಂಡಿಗ ಆ್ಯರೊನ್ ಫಿಂಚ್ ಸಹಿತ ಒಟ್ಟು 4 ವಿಕೆಟ್‌ಗಳನ್ನು ಕಬಳಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದರು. ಇನ್ನುಳಿದ ಯುವ ಬೌಲರ್‌ಗಳಾದ ಮುಸ್ತಫಿಝುರ್ರಹ್ಮಾನ್, ಬರಿಂದರ್ ಸ್ರಾನ್, ದೀಪಕ್ ಹೂಡಾ ಹಾಗೂ ಬಿಪುಲ್ ಶರ್ಮ ಪರಿಣಾಮಕಾರಿ ಪ್ರದರ್ಶನ ನೀಡುತ್ತಿದ್ದಾರೆ.

ಮತ್ತೊಂದೆಡೆ, ನಾಲ್ಕು ಪಂದ್ಯಗಳಲ್ಲಿ 2 ಅಂಕವನ್ನು ಗಳಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೈದರಾಬಾದ್‌ನ್ನು ಮಣಿಸಬೇಕಾದರೆ ಪಂಜಾಬ್‌ನ ನಾಯಕ ಡೇವಿಡ್ ಮಿಲ್ಲರ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ವೋರಾ ಸಿಡಿದೇಳಬೇಕಾಗಿದೆ.

ವಾರ್ನರ್ ಪಡೆಯನ್ನು ನಿಯಂತ್ರಿಸಲು ಮೋಹಿತ್ ಶರ್ಮ, ಸಂದೀಪ್ ಶರ್ಮ, ಅಕ್ಷರ್ ಪಟೇಲ್ ಅವರನ್ನೊಳಗೊಂಡ ಬೌಲಿಂಗ್ ಪಡೆ ಉತ್ತಮ ದಾಳಿ ಸಂಘಟಿಸಬೇಕಾಗಿದೆ.

ಪಂದ್ಯದ ಸಮಯ: ರಾತ್ರಿ 8:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News