ಪ್ರಣಯ್, ಸಿಂಧು ಹೋರಾಟ ಅಂತ್ಯ
ಚೀನಾ ಮಾಸ್ಟರ್ಸ್ ಗ್ರಾನ್ ಪ್ರಿ ಬ್ಯಾಡ್ಮಿಂಟನ್ ಟೂರ್ನಿ
ಚಾಂಗ್‌ಝೌ, ಎ.22: ಚೀನಾ ಮಾಸ್ಟರ್ಸ್ ಗ್ರಾನ್ ಪ್ರಿ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಶಟ್ಲರ್‌ಗಳಾದ ಎಚ್‌ಎಸ್ ಪ್ರಣಯ್ ಹಾಗೂ ಪಿ.ವಿ. ಸಿಂಧು ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ನೇರ ಸೆಟ್‌ಗಳಿಂದ ಸೋಲುವ ಮೂಲಕ ಟೂರ್ನಿಯಿಂದ ಹೊರ ನಡೆದಿದ್ದಾರೆ.
ಭಾರತದ ಮಹಿಳೆಯರ ಡಬಲ್ಸ್ ಜೋಡಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಚೀನಾದ ಅಗ್ರ ಶ್ರೇಯಾಂಕದ ಲೂಯೊ ಯಿಂಗ್ ಹಾಗೂ ಲೂ ವಿರುದ್ಧ 11-21, 14-21 ಸೆಟ್‌ಗಳ ಅಂತರದಿಂದ ಸೋಲುವುದರೊಂದಿಗೆ ಟೂರ್ನಿಯಲ್ಲಿ ಭಾರತದ ಅಭಿಯಾನ ಕೊನೆಗೊಂಡಿತು.
ಶುಕ್ರವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಸಿಂಧು ಥಾಯ್ಲೆಂಡ್‌ನ ಪಾರ್ನ್‌ಟಿಪ್ ಬುರಾನಪ್ರಸೆರ್‌ಸಕ್ ವಿರುದ್ಧ 21-17, 21-19 ಗೇಮ್‌ಗಳ ಅಂತರದಿಂದ ಸೋತರು.
ಕೇವಲ 38 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು ಎರಡು ಗೇಮ್‌ನ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರೂ ಗೆಲುವು ಸಾಧಿಸಲು ವಿಫಲರಾದರು.
ಪುರುಷರ ಸಿಂಗಲ್ಸ್‌ನಲ್ಲಿ ಏಳನೆ ಶ್ರೇಯಾಂಕದ ಪ್ರಣಯ್ ಅಗ್ರ ಶ್ರೇಯಾಂಕದ ಚೆನ್ ಲಾಂಗ್ ವಿರುದ್ಧ ಕೇವಲ 46 ನಿಮಿಷಗಳ ಹೋರಾಟದಲ್ಲಿ 10-21, 15-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಪ್ರಣಯ್ ತಲಾ ಎರಡು ಬಾರಿ ವಿಶ್ವ ಚಾಂಪಿಯನ್ ಹಾಗೂ ಆಲ್ ಇಂಗ್ಲೆಂಡ್ ಚಾಂಪಿಯನ್ ಆಗಿರುವ ಲಾಂಗ್ ವಿರುದ್ಧ ಮೂರನೆ ಬಾರಿ ಸೋತಿದ್ದಾರೆ.
ಗುರುವಾರ ಇಲ್ಲಿ ನಡೆದ ಸಿಂಗಲ್ಸ್ ಪಂದ್ಯಗಳಲ್ಲಿ ಪ್ರಣಯ್ ಹಾಗೂ ಸಿಂಧು ನೇರ ಸೆಟ್‌ಗಳಿಂದ ಗೆಲುವು ಸಾಧಿಸಿ ಅಂತಿಮ 8ರ ಘಟ್ಟ ತಲುಪಿದ್ದಾರೆ.ಆದರೆ, ಪುರುಷರ ಡಬಲ್ಸ್ ಜೋಡಿ ಪ್ರಣಯ್ ಜೆ.ಚೋಪ್ರಾ ಹಾಗೂ ಅಕ್ಷಯ್ ದೇವಾಲ್ಕರ್ ಸವಾಲು ಅಂತ್ಯಗೊಂಡಿದೆ. ಮಲೇಷ್ಯಾದ ಡರೆನ್ ಲೀವ್‌ರನ್ನು 34 ನಿಮಿಷಗಳ ಪಂದ್ಯದಲ್ಲಿ 21-10, 21-15 ಗೇಮ್‌ಗಳ ಅಂತರದಿಂದ ಮಣಿಸಿದ್ದರು.
ನಾಲ್ಕನೆ ಶ್ರೇಯಾಂಕದ ಸಿಂಧು ಕೇವಲ 33 ನಿಮಿಷಗಳ ಪಂದ್ಯದಲ್ಲಿ ಚೈನೀಸ್ ತೈಪೆಯ ಚೆನ್ ಹ್ಯೂ ಯೂ ಅವರನ್ನು 21-9, 21-17 ಗೇಮ್‌ಗಳ ಅಂತರದಿಂದ ಸುಲಭವಾಗಿ ಸೋಲಿಸಿದ್ದರು.
ಮಹಿಳೆಯರ ಡಬಲ್ಸ್‌ನಲ್ಲಿ ಜ್ವಾಲಾ ಹಾಗೂ ಪೊನ್ನಪ್ಪ ಚೈನೀಸ್ ತೈಪೆಯ ಸೀ ಪೀ ಚೆನ್ ಹಾಗೂ ವೂ ಟಿ ಜಂಗ್‌ರನ್ನು 21-12, 21-12 ಸೆಟ್‌ಗಳಿಂದ ಸೋಲಿಸಿದ್ದರು.