ಕಾಕ್‌ಪಿಟ್‌ನಲ್ಲಿ ಗಗನಸಖಿ ಜತೆ ಏಕಾಂತ ಬಯಸಿದ ಪೈಲಟ್

Update: 2016-04-23 03:16 GMT

ಹೊಸದಿಲ್ಲಿ, ಎ. 23: ಸ್ಪೈಸ್ ಜೆಟ್ ವಿಮಾನದ ಅಂತಾರಾಷ್ಟ್ರೀಯ ಬೋಯಿಂಗ್ 737 ವಿಮಾನದಲ್ಲಿ ಗಗನಸಖಿಯನ್ನು ಕಾಕ್‌ಪಿಟ್‌ನ ತನ್ನ ಆಸನದಲ್ಲಿ ಕುಳಿತುಕೊಳ್ಳುವಂತೆ ಬಲವಂತ ಮಾಡಿದ ಪೈಲಟ್ ಒಬ್ಬರಿಗೆ ಕಂಪನಿ ಗೇಟ್‌ಪಾಸ್ ನೀಡಿದೆ. ವಿಮಾನದ ಕಮಾಂಡರ್ ಆಗಿದ್ದ ಈತ ಸಹ ಪೈಲಟ್‌ನನ್ನು ಹೊರಗೆ ಕಳುಹಿಸಿ, ಸುಧೀರ್ಘ ಅವಧಿಗೆ ಗಗನಸಖಿ ಜತೆ ಏಕಾಂತದಲ್ಲಿದ್ದ ಎನ್ನುವುದು ಆತನ ಮೇಲಿನ ಆರೋಪ.

ಇದು ಗಂಭೀರ ಭದ್ರತಾ ಲೋಪವಾಗಿದ್ದು, ಅನಧಿಕೃತ ವ್ಯಕ್ತಿಯನ್ನು ಪೈಲಟ್ ಆಸನದಲ್ಲಿ ಕೂರಿಸಿರುವುದು ಹಾಗೂ ಕರ್ತವ್ಯದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಕೊಲ್ಕತ್ತಾ- ಬ್ಯಾಂಕಾಕ್ ವಿಮಾನದ ಪೈಲಟ್ ವಿರುದ್ಧ ಈ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ಫೆಬ್ರವರಿ 28ರಂದು ಈ ಘಟನೆ ನಡೆದಿದ್ದು, ರಾತ್ರಿ ವೇಳೆ ಬ್ಯಾಂಕಾಕ್‌ನಿಂದ ವಾಪಸ್ಸಾಗುತ್ತಿದ್ದಾಗ ಕೂಡಾ ಇದು ಮರುಕಳಿಸಿದೆ ಎಂದು ಹೇಳಲಾಗಿದೆ.

ವಿಮಾನದ ಮುಖ್ಯ ಗಗನಸಖಿಯ ಜತೆ ಕೆಟ್ಟ ಭಾಷೆ ಬಳಸಿ ಮಾತನಾಡದೇ ಇದ್ದಿದ್ದರೆ ಈ ಪ್ರಕರಣ ಬೆಳಕಿಗೆ ಬರುತ್ತಲೇ ಇರಲಿಲ್ಲ. ಆಕೆ ವಿಮಾನಯಾನ ಸಂಸ್ಥೆಗೆ ಈ ಬಗ್ಗೆ ದೂರು ನೀಡಿದಳು. ಸಂಸ್ಥೆ ಸ್ವಯಂ ತನಿಖೆ ನಡೆಸಿ, ವಿಮಾನಯಾನ ನಿರ್ದೇಶನಾಲಕ್ಕೂ ಈ ಬಗ್ಗೆ ದೂರು ನೀಡಿತು. ಸ್ಪೈಸ್‌ ಜೆಟ್ ಅಧ್ಯಕ್ಷ ಅಜಯ್ ಸಿಂಗ್, ಪೈಲಟ್‌ನನ್ನು ವಜಾ ಮಾಡುವಂತೆ ಸೂಚಿಸಿದರು ಎಂದು ತಿಳಿದುಬಂದಿದೆ.

ಆತನ ಪೈಲಟ್ ಲೈಸನ್ಸ್ ಕೂಡಾ ವಿಮಾನಯಾನ ನಿರ್ದೇಶನಾಲಯದಿಂದ ರದ್ದಾಗುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News