ಕುಡಿಯುವ ನೀರು ನೀಡುವ ಕಾರ್ಯಕ್ರಮಕ್ಕೆ ಮೊದಲ ಆದ್ಯತೆ - ಸಚಿವ ಎಚ್.ಕೆ. ಪಾಟೀಲ್
ಪುತ್ತೂರು, ಎ. 23: ರಾಜ್ಯದಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಕುಡಿಯುವ ನೀರು ನೀಡುವ ಕಾರ್ಯಕ್ರಮಕ್ಕೆ ಮೊದಲ ಆದ್ಯತೆ ನೀಡಬೇಕು. ಪ್ರತಿಯೊಂದು ಯೋಜನೆಯೂ ತಳಮಟ್ಟದಿಂದ ಕಾರ್ಯರೂಪಕ್ಕೆ ಬರಬೇಕು. ಅದಕ್ಕೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಅವರು ಶನಿವಾರ ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ ಅಂಗವಾಗಿ ರಾಜ್ಯದ ಜನತೆ ಹಾಗೂ ಅಧಿಕಾರಿಗಳನ್ನು ಉದ್ದೇಶಿಸಿ, ಉಪಗ್ರಹ ಆಧಾರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುತ್ತೂರು ಪುರಭವನದಲ್ಲಿ ಸಾರ್ವಜನಿಕರ ಸದುಪಯೋಗಕ್ಕಾಗಿ ಕಾರ್ಯಕ್ರಮದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್.ಎಸ್, ತಹಶೀಲ್ದಾರರು ಸಣ್ಣ ರಂಗಯ್ಯ, ಜಿ.ಪಂ. ಸದಸ್ಯರು, ತಾ.ಪಂ. ಸದಸ್ಯರು, ಗ್ರಾ.ಪಂ ಸದಸ್ಯರು, ತಾಲೂಕು ಮತ್ತು ಗ್ರಾಮ ಮಟ್ಟದ ಅಧಿಕಾರಿಗಳು ಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಕ್ಕಳ ಶಿಕ್ಷಣಕ್ಕೆ ಒತ್ತುಕೊಡುವ ಮೂಲಕ ಪಂಚಾಯತ್ ರಾಜ್‌ನ ಆಶಯಕ್ಕೆ ಆದ್ಯತೆ ನೀಡಬೇಕಾಗಿದೆ. ಯಾವುದೇ ಯೋಜನೆಗಳು ಗ್ರಾಮ ಮಟ್ಟದಿಂದ ಅಬ್ಯುದಯಗೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದಕ್ಕಾಗಿ ರಾಜ್ಯ ಸರಕಾರ ಪ್ರತಿಯೊಂದು ಯೋಜನೆಗಳನ್ನು ಗ್ರಾಮ ಮಟ್ಟದಿಂದಲೇ ತಯಾರಾಗುವ ಹಾಗೆ ನಮ್ಮ ಗ್ರಾಮ ನಮ್ಮ ಯೋಜನೆ ಕಾರ್ಯಗತಗೊಳಿಸುತ್ತಿದೆ ಎಂದು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್‌ನ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾ ದೇವಿ, ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಶಿವಶಂಕರ್ ಹಾಗೂ ಗೋಪಾಲ್ ಉಪಸ್ಥಿತರಿದ್ದರು. ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.