ಬೆಳ್ತಂಗಡಿ: ಹೆಚ್.ಐ.ವಿ ಸೋಂಕಿತರ ಸೇವಾ ಕೇಂದ್ರದ ದಶಮಾನೋತ್ಸವ
ಬೆಳ್ತಂಗಡಿ, ಎ. 23: ಮಾನವೀಯತೆಯಿಲ್ಲದ ವ್ಯಕ್ತಿಗಳು ಸರಕಾರಗಳನ್ನು ಮುನ್ನಡೆಸುತ್ತಿರುವ ಇಂದಿನ ದಿನಗಳಲ್ಲಿ ಬ್ರಷ್ಟಾಚಾರ ಎಲ್ಲೆಡೆ ವ್ಯಾಪಿಸುತ್ತಿದೆ ಇಂತಹ ಸಂದರ್ಭದಲ್ಲಿ ಆಡಳಿತದಲ್ಲಿರುವ ನೂನ್ಯತೆಗಳನ್ನು ಎತ್ತಿ ತೋರಿಸಿ ತಿದ್ದಬೇಕಾಗಿರುವ ಲೋಕಾಯುಕ್ತ ವ್ಯವಸ್ತೆ ಹೆಚ್ಚು ಬಲಯುತವಾಗಿ ಇರಬೇಕಾದ ಅಗತ್ಯವಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ಅವರು ಶನಿವಾರ ಬೆಳ್ತಂಗಡಿಯ ಜ್ಞಾನ ನಿಲಯದಲ್ಲಿ ದಕ್ಷಿಣ ಕನ್ನಡ ರೂರಲ್ ಡೆವಲೆಪ್ ಮೆಂಟ್ ಸೊಸೈಟಿ ಬೆಳ್ತಂಗಡಿ ಹಾಗೂ ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರ ಕಾಶಿಬೆಟ್ಟು ಇದರ ವತಿಯಿಂದ ಹೆಚ್.ಐ.ವಿ ಸೋಂಕಿತರ ಸೇವಾ ಕೇಂದ್ರದ ದಶಮಾನೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಜೀವನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಧಿಗಳಾಗಿ ಆಗಮಿಸಿ ಮಾತನಾಡಿದರು.
ಸಮಾಜದಲ್ಲಿ ಇಂದು ಮಾನವೀಯ ಮೌಲ್ಯಗಳು ಮಾಯವಾಗುತ್ತಿದೆ. ಮನುಷ್ಯ ಹುಟ್ಟುವಾಗ ಆತನೂ ಇತರ ಪ್ರಾಣಿಗಳಂತೆ ಇರುತ್ತಾನೆ ಆದರೆ ಬೆಳೆಯುತ್ತಾ ಮಾನವೀಯತೆಯನ್ನು ಬೆಳೆಸಿಕೊಂಡಾಗ ಮಾನವನಾಗುತ್ತಾನೆ. ಉತ್ತಮ ಮೌಲ್ಯಗಳನ್ನು ನೀಡುವ ಕಾರ್ಯ ನಡೆಯಬೇಕಾಗಿದೆ ಎಂದರು. ಬಡವರಿಗೆ ರೋಗಿಗಳಿಗೆ ಸಹಾಯ ಮಾಡುವ ಈ ಸಂಸ್ಥೆ ಉತ್ತಮ ಕಾರ್ಯವನ್ನು ಮಾಡುತ್ತಿದೆ ಹಲವರ ಪಾಲಿಗೆ ಹೊಸ ಬೆಳಕನ್ನು ನೀಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.
ಓರ್ವ ಪ್ರಾಮಾಣಿಕ ನ್ಯಾಯಪರವಾಗಿ ಕಾರ್ಯನಿರ್ವಹಿಸುವ ಲೋಕಾಯುಕ್ತರ ನೇಮಕವಾಗಬೇಕಾದುದು ಅಗತ್ಯವಾಗಿದೆ. ಆದರೆ ಸರಕಾರ ಮಾತ್ರ ಈ ವಿಚಾರದಲ್ಲಿ ಅನಗತ್ಯ ವಿಳಮಬ ಮಾಡುತ್ತಿದೆ. ಆನತೆ ಸರಕರದಿಂದ ಅಧಿಕಾರಿಗಳಿಂದ ಆಗುವ ತೊಂದರೆಗಳ ಬಗ್ಗೆ ಲೋಕಾಯುಕ್ತರಿಗೆ ನೇರವಾಗಿ ದೂರನ್ನು ನೀಡಿ ಅಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ ಆಳ್ವ ಮಾತನಾಡಿ ಇಂದಿನ ದಿನಗಳಲ್ಲಿ ಸೇವೆಯೂ ವ್ಯಾಪಾರೀಕರಣವಾಗುತ್ತಿರುವಾಗ ಕ್ರೈಸ್ಥ ಸಂಸ್ಥೆಗಳು ನಿಜವಾದ ಅರ್ಧದಲ್ಲಿ ಸೇವೆಯನ್ನು ಮಾಡುತ್ತಿದೆ. ಹಿಂದೆಲ್ಲ ಏಡ್ಸ್ ಬಾಧಿತರನ್ನು ಸಮಾಜದಿಂದ ಹೊರಗಟ್ಟುವ ಪ್ರವೃತ್ತಿ ಇತ್ತು ಮನೆಯಲ್ಲಿಯೇ ಅವರಿಗೆ ಸ್ಥಾನವಿರಲಿಲ್ಲ ಆದರೆ ಇಂತಹ ಸಂಸ್ಥೆಗಳ ಕಾರ್ಯ ಚಟುವಟಿಕೆಯಿಂದಾಗಿ ಏಡ್ಸ್ ಬಾಧಿತರಿಗೂ ಸಮಾಜದಲ್ಲಿ ಬದುಕಲು ಅವಕಾಶದೊರೆತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ ಲಾರೆನ್ಸ್ ಮುಕ್ಕುಯಿ ಅವರು ಮಾತನಾಡಿ ಕಳೆದ ಒಂದು ದಶಕದಿಂದ ಸಂಸ್ಥೆ ಏಡ್ಸ್ ಪಿಡಿತರ ನಡುವೆ ಕಾರ್ಯನಿರ್ವಹಿಸುತ್ತಾ ಅವರ ಬದುಕಿಗೆ ಆಸರೆಯಾಗಿ ನಿಂತಿದೆ. ಅನೇಕರ ಸೇವೆ ತ್ಯಾಗದಿಂದ ಇದು ಸಾಧ್ಯವಾಗಿದೆ. ಅಶಕ್ತರಿಗೆ ಸೇವೆ ಮಾಡಿದರೆ ಅದು ದೇವರಿಗೆ ಸೇವೆ ಮಾಡಿದಂತೆಯೇ ಆಗುತ್ತದೆ. ದುರ್ಬಲರ, ಬಡವರ ನೋವಿಗೆ ಸ್ಪಂದಿಸುವ ಕಾರ್ಯವನ್ನು ಮಾಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರಿನ ಶಾಸಕ ಜೆ ಆರ್ ಲೋಬೋ, ತುಳು ಕೂಟ ಕುವೈಟ್ ಇದರ ಸ್ಥಾಪಕಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಕ್ರಾಸ್ ಬೆಂಗಳೂರು ಇದರ ನಿರ್ದೇಶಕರಾದ ಫಾ. ಸೆಬಾಸ್ಟಿಯನ್ ಫೆರ್ನಾಂಡಿಸ್, ಕ್ಯಾಧೋಲಿಕ್ ಹೆಲ್ತ್ ಎಸೋಸಿಯೇಶನ್ ಆಫ್ ಕರ್ನಾಟಕ ಇದರ ಅಧ್ಯಕ್ಷ ಸಂತೋಷ್ ಡಯಾಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಸರಸ್ವತಿ, ರೋಶಿನಿ ನಿಲಯದ ಮಾಜಿ ಪ್ರಾಂಶುಪಾಲರಾದ ಡಾ,ಜೆಸ್ಸಿಂತಾ ಡಿ,ಸೋಜ, ಉಜಿರೆ ಎಸ್.ಡಿ.ಎಂ ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ರವಿಶಂಕರ್, ಸೀಮಾ ಮಧಾಯಸ್, ಮುರಳೀಕೃಷ್ಣ ಇರ್ವತ್ರಾಯ, ಪ್ರೇಮ ಮತ್ತಿತರರು ಉಪಸ್ಥಿತರಿದ್ದರು. ನಿರ್ದೇಶಕ ಫಾ ಜೋಸ್ ಆಯಂಕುಡಿ ಸ್ವಾಗತಿಸಿದರು.