ಕೊರಗ ಕುಟುಂಬಕ್ಕೆ ಹಕ್ಕು ಪತ್ರ ನೀಡಿ: ಕೆಯ್ಯೂರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಆಗ್ರಹ
ಪುತ್ತೂರು, ಎ. 23: ಕೆಯ್ಯೂರು ಗ್ರಾಮದಲ್ಲಿರುವ ಅತ್ಯಂತ ಕಡು ಬಡವರಾಗಿರುವ ಎರಡು ಕೊರಗ ಜನಾಂಗದ ಕುಟುಂಬಕ್ಕೆ ಇದುವರೆಗೆ 94 ಸಿ ಹಕ್ಕುಪತ್ರ ಸಿಕ್ಕಿಲ್ಲ. ಅವರಲ್ಲಿ ಹಕ್ಕು ಪತ್ರ ಪಡೆಯಲು ಪಾವತಿ ಮಾಡಬೇಕಾದ ಹಣವನ್ನು ಕಟ್ಟಲೂ ಸಾಧ್ಯವಿಲ್ಲ ಹೀಗಿರುವಾಗ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಕೆಯ್ಯೂರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.
ಕೆಯ್ಯೂರು ಗ್ರಾ.ಪಂ. ಗ್ರಾಮ ಸಭೆಯು ಕೆಯ್ಯೂರು ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷ ಬಾಬುರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಿವರಾಮ ರೈ ಕಜೆ ಅವರು ಕೊರಗ ಜನಾಂಗದ ಕುಟುಂಬಗಳು ತೀರಾ ಬಡತನದಲ್ಲಿವೆ. ಅವರ ಸ್ಥಿತಿಯನ್ನು ನೋಡಲು ಸಾಧ್ಯವಿಲ್ಲದಾಗಿದೆ. ಮನೆ ಇಲ್ಲದೆ ಚಪ್ಪರ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಅವರಿಗೆ ಇದುವರೆಗೆ 94ಸಿ ಹಕ್ಕುಪತ್ರ ಸಿಕ್ಕಿಲ್ಲ ಈ ಬಗ್ಗೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಕಂದಾಯ ನಿರೀಕ್ಷಕಿ ಸುಜಾತ ರೈ ಅವರು, ಗ್ರಾಮದ 144 ಅರ್ಜಿಗಳಲ್ಲಿ 84 ಕಡತಗಳು ಸಿದ್ಧವಾಗಿದೆ. ಎ.28 ಕ್ಕೆ ತಹಶೀಲ್ದಾರ್‌ರವರು ಸ್ಥಳಕ್ಕೆ ಬರಲಿದ್ದಾರೆ. ಈ ಸಂದರ್ಭದಲ್ಲಿ ಅರ್ಜಿದಾರರು ಸ್ಥಳದಲ್ಲಿಯೇ ಕುಂದುಕೊರತೆಗಳನ್ನು ಹೇಳಿಕೊಳ್ಳಬಹುದು. ಹಕ್ಕುಪತ್ರ ಪಡೆಯಲು 1400 ರೂಪಾಯಿ ಸರಕಾರಕ್ಕೆ ಪಾವತಿಸಲೇಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ನೊಡೆಲ್ ಅಧಿಕಾರಿಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಸುಧಾಕರ ರೈ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು. ಗ್ರಾಮಸ್ಥರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ವಿದ್ಯುತ್ ಬಿಲ್ 450 ಕ್ಕಿಂತ ಹೆಚ್ಚು ಬಂದರೆ ಕಾರ್ಡ್ ತನ್ನಿಂದಾನೆ ರದ್ದಾಗುವ ಸಂಭವ ಇದೆ, ಇದು ಅಧಿಕಾರಿಗಳು ಮಾಡುವಂತದ್ದು ಅಲ್ಲ ಈ ರೀತಿಯ ಸಿಸ್ಟಮ್ ಅನ್ನು ಕಂಪ್ಯೂಟರ್‌ನಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಎಲ್‌ಇಡಿ ಬಲ್ಬ್‌ಗಳನ್ನು ಸರಕಾರ ಪ್ರತಿ ಮನೆಗೆ 100 ರೂಪಾಯಿಗಳಂತೆ ಈ ಹಿಂದೆ ನೀಡಿತ್ತು. ಬಹಳಷ್ಟು ಮಂದಿ ಬಲ್ಬ್ ಖರೀದಿಸಿದ್ದಾರೆ. ಆದರೆ ಇದೀಗ ಅದೇ ಬಲ್ಬ್ ಅನ್ನು 80 ರುಪಾಯಿಗಳಲ್ಲಿ ನೀಡಲಾಗುತ್ತದೆ ಆದ್ದರಿಂದ ಈ ಹಿಂದೆ ಖರೀದಿಸಿದ ಗ್ರಾಹಕರಿಗೆ 20 ರೂಪಾಯಿಗಳನ್ನು ವಾಪಾಸ್ ಕೊಡಿಸುವಂತೆ ಅಗ್ರಹಿಸಿದ ಗ್ರಾ.ಪಂ ಸದಸ್ಯ ಎ.ಕೆ ಜಯರಾಮ ರೈ ಅವರು ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ತಿಳಿಸಿದರು. ಅದರಂತೆ ನಿರ್ಣಯಿಸಲಾಯಿತು. ಎನ್‌ಆರ್‌ಇಜಿ ಕೂಲಿ ಹಣ ಹೆಚ್ಚಳ
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಇದೀಗ ಕೂಲಿ ಹಣ ರೂ. 224 ಆಗಿದ್ದು ಪ್ರತಿಯೊಬ್ಬರು ಯೋಜನೆಯಡಿಯಲ್ಲಿ ಕೆಲಸ ಮಾಡಬೇಕು ಎಂದು ಯೋಜನೆಯ ಸಹಾಯಕ ನಿರ್ದೇಶಕ ಸುಧಾಕರ ರೈ ತಿಳಿಸಿದರು. 90 ಮಾನವ ದಿನಗಳಿಗೆ ನಿಗದಿ ಮಾಡಲಾಗಿದೆ ಎಂದು ತಿಳಿಸಿದ ಅವರು ಗ್ರಾಮಸ್ಥರಿಗೆ ಮಾಹಿತಿಯ ಕೊರತೆಯಿಂದ ಅದೆಷ್ಟೋ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರುಗಳಾದ ಅಬ್ದುಲ್ ಖಾದರ್ ಮೇರ್ಲ, ಹನೀಫ್ ಕೆ.ಎಂ, ವಿಮಲಾ, ಸುಮಿತ್ರಾ, ಹರಿಣಾಕ್ಷಿ, ಲಾವಣ್ಯ, ರಾಧಿಕಾ, ಪದ್ಮಾವತಿ, ಅಮಿತಾ ರೈ, ಗೀತಾ ಉಪಸ್ಥಿತರಿದ್ದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಕೆ.ಎಂ. ಸುಬ್ರಹ್ಮಣ್ಯ ಸ್ವಾಗತಿಸಿ, ವಂದಿಸಿದರು.