ಮುಶರ್ರಫ್‌ರ ವೈದ್ಯಕೀಯ ವರದಿ ನಕಲಿ: ನ್ಯಾಯಾಲಯ
ಇಸ್ಲಾಮಾಬಾದ್, ಎ. 23: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಝ್ ಮುಶರ್ರಫ್‌ರ ವೈದ್ಯಕೀಯ ವರದಿ ‘‘ನಕಲಿ’’ ಎಂದು ದೇಶದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವೊಂದು ಇಂದು ಹೇಳಿದೆ ಹಾಗೂ 2007ರ ನ್ಯಾಯಾಧೀಶರ ಬಂಧನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ತನಗೆ ವಿನಾಯಿತಿ ನೀಡಬೇಕೆಂದು ಕೋರಿ ಅವರು ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದೆ.
ಮುಶರ್ರಫ್‌ರ ವಿದೇಶ ಪ್ರವಾಸಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದ ಬಳಿಕ, 72 ವರ್ಷದ ಮುಶರ್ರಫ್ ಕಳೆದ ತಿಂಗಳು ‘‘ಚಿಕಿತ್ಸೆಗಾಗಿ’’ ದುಬೈಗೆ ತೆರಳಿದ್ದರು.
ಮುಶರ್ರಫ್‌ರ ಎಪ್ರಿಲ್ 6ರ ವೈದ್ಯಕೀಯ ವರದಿಯನ್ನು ಅವರ ವಕೀಲ ರಾವಲ್ಪಿಂಡಿಯಲ್ಲಿರುವ ನ್ಯಾಯಾಲಯಕ್ಕೆ ಸಲ್ಲಿಸಿದರು. ಜೊತೆಗೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ತನ್ನ ಕಕ್ಷಿದಾರನಿಗೆ ವಿನಾಯಿತಿ ನೀಡಬೇಕು ಎಂದು ಕೋರುವ ಮನವಿಯನ್ನೂ ಸಲ್ಲಿಸಿದರು.
ಆದರೆ, ಎರಡನ್ನೂ ತಿರಸ್ಕರಿಸಿದ ನ್ಯಾಯಾಧೀಶರು, ಈ ತಿಂಗಳ ಆದಿ ಭಾಗದಲ್ಲಿ ಮಾಜಿ ಸೇನಾ ಮುಖ್ಯಸ್ಥನ ವಿರುದ್ಧ ಹೊರಡಿಸಲಾಗಿರುವ ಜಾಮೀನುರಹಿತ ಬಂಧನ ವಾರಂಟ್‌ಗಳು ಈಗಲೂ ಊರ್ಜಿತವಾಗಿವೆ ಎಂದು ಘೋಷಿಸಿದರು.