ರಾಜು ಕೋಟ್ಯಾನ್ ಕೊಲೆ ಪ್ರಕರಣ: ಆರೋಪಿ ನ್ಯಾಯಾಲಯಕ್ಕೆ ಶರಣು

Update: 2016-04-23 18:40 GMT

ಉಳ್ಳಾಲ, ಎ.23: ಮೊಗವೀರಪಟ್ಣ ನಿವಾಸಿ ರಾಜು ಕೋಟ್ಯಾನ್ ಕೊಲೆ ನಡೆಸಿದ ಆರು ಆರೋಪಿಗಳ ಪೈಕಿ ಕೊನೆಯ ಆರೋಪಿ ಸುಹೈಲ್ ನ್ಯಾಯಾಲಯಕ್ಕೆ ಶರಣಾಗುವ ಮೂಲಕ ಎಲ್ಲಾ ಆರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

   ಮೊಗವೀರಪಟ್ಣ ಬಳಿಯ ಬರಕಾ ಫಿಶ್ ಮಿಲ್ ಬಳಿ ಎ.12ರಂದು ರಾಜು ಕೋಟ್ಯಾನ್‌ರನ್ನು ಮುಹಮ್ಮದ್ ಆಸೀಫ್ ಸೇರಿದಂತೆ 6 ಜನರ ತಂಡ ಕೊಲೆ ನಡೆಸಿ ಪರಾರಿಯಾಗಿತ್ತು. ಕೊಲೆ ನಡೆದ 24 ಗಂಟೆಯೊಳಗೆ ಉಳ್ಳಾಲ ಕೋಟೆಪುರ ನಿವಾಸಿಗಳಾದ ಮುಹಮ್ಮದ್ ಅಸ್ವೀರ್ ಯಾನೆ ಅಚ್ಚು (19), ಅಬ್ದುಲ್ ಮುತ್ತ್ತಲಿಬ್ ಯಾನೆ ಮುತ್ತು (20), ಬಾಸಿತ್ ಅಲಿ(17)ಯನ್ನು ಬಂಧಿಸಲಾಗಿತ್ತು. ಬಳಿಕ ಅಬ್ದುಲ್ ರೆನ್ನಿಸ್ (17) ಸೆರೆಯಾದರೆ, ಪ್ರಮುಖ ಆರೋಪಿ ಮಹಮ್ಮದ್ ಆಸೀಫ್(22)ನನ್ನು ಗುರುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಕೊನೆಯ ಆರೋಪಿ ಸುಹೈಲ್ ನ್ಯಾಯಾಲಯಕ್ಕೆ ಶರಣಾಗುವ ಮೂಲಕ ಕೊಲೆಗೆ ಸಂಬಂಧಿಸಿದ ಎಲ್ಲಾ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ನೇತೃತ್ವದಲ್ಲಿ ಉಳ್ಳಾಲ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಲೆಯ ಪ್ರಮುಖ ಆರೋಪಿ ಆಸೀಫ್ ಕೋಳಿ ಸಾಗಾಟದ ವಾಹನದಲ್ಲಿ ಚಾಲಕನಾಗಿದ್ದು, ಈ ಹಿಂದೆ ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ. ಅಸ್ವೀರ್ ಕೋಳಿ ಅಂಗಡಿಯಲ್ಲಿ, ಸುಹೈಲ್ ಮತ್ತು ಮುತ್ತಲಿಬ್ ಮೇಸ್ತ್ರಿ, ಬಾಸಿತ್ ಅಲಿ ಕೂಲಿ, ರೆನಿಸ್ ತಂದೆಯೊಂದಿಗೆ ಪೈಂಟಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ತನಿಖಾಧಿಕಾರಿಯಾಗಿ ಕೊಣಾಜೆ ಇನ್‌ಸ್ಪೆಕ್ಟರ್ ಅಶೋಕ್ ಪಿ. ಕಾರ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News