ಮೇ 7ರಂದು ನಡೆಯಲಿದೆ ಶತಮಾನೋತ್ಸವ
ಸುಳ್ಯ, ಎ. 24: ಐವರ್ನಾಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಕಾರ್ಯಕ್ರಮ ಮೇ 7ರಂದು ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ದಿನೇಶ್ ಮಡ್ತಿಲ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ಸಚಿವ ಕಿಮ್ಮನೆ ರತ್ನಾಕರ ನೂತನ ತರಗತಿ ಕೊಠಡಿಗಳನ್ನು ಉದ್ಘಾಟಿಸಲಿದ್ದಾರೆ.
ಮಡ್ತಿಲ ಪುರುಷೋತ್ತಮ ಗೌಡ ಸ್ಮಾರಕ ರಂಗ ಮಂದಿರವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕಿಮ್ಮನೆ ರತ್ನಾಕರ ಹಾಗೂ ಬಿ.ರಮಾನಾಥ ರೈ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ. ಸಾಧನೆಗೈದ ಹಳೆ ವಿದ್ಯಾರ್ಥೀಗಳಿಗೆ ಹಾಗೂ ದಾನಿಗಳನ್ನು ಗೌರವಿಸಲಾಗುತ್ತದೆ. ರಾತ್ರಿ ಶಾಲಾ ಮಕ್ಕಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಕುದ್ರೋಳಿ ಗಣೇಶ್ ಮತ್ತು ಬಳಗದವರಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಲಿದೆ ಎಂದವರು ಹೇಳಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಬೆಳ್ಯಪ್ಪ ಗೌಡ, ಸ್ಮರಣ ಸಂಚಿಕೆ ಪ್ರಧಾನ ಸಂಪಾದಕ ವೀರಪ್ಪ ಗೌಡ, ಮುಖ್ಯ ಶಿಕ್ಷಕಿ ಬಿ.ಸಿ.ಗಿರಿಜಮ್ಮ, ಎಸ್‌ಡಿಎಂಸಿ ಅಧ್ಯಕ್ಷ ನಾಗಪ್ಪ ಗೌಡ ಪಾಲೆಪ್ಪಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.