ಸುಸ್ತಿ ಬಾಕಿ ನೋಟಿಸ್, ಸುಸ್ತಾಗುವ ಸರದಿ ಹನುಮಂತನದು!
ಅರಾ, ಎ. 24: ಕೋಟ್ಯಂತರ ರೂಪಾಯಿ ತೆರಿಗೆ ಸುಸ್ತಿದಾರರಿಂದ ಬಾಕಿ ವಸೂಲಾತಿಗೆ ಕ್ರಮ ಕೈಗೊಳ್ಳಲು ಮುಂದಾಗಿರುವ ಇಲ್ಲಿನ ಮಹಾನಗರ ಪಾಲಿಕೆ ಇದೀಗ ಹನುಮಂತ ದೇವರಿಗೆ 4.33 ಲಕ್ಷ ರೂಪಾಯಿ ಆಸ್ತಿ ತೆರಿಗೆ ಬಾಕಿಯ ನೋಟಿಸ್ ನೀಡಿ ಸುದ್ದಿಯಲ್ಲಿದೆ.
"ಹನುಮಂತ ದೇವರು 4.33 ಲಕ್ಷ ರೂಪಾಯಿಯ ಆಸ್ತಿ ತೆರಿಗೆ ಬಾಕಿ ಇರಿಸಿಕೊಂಡಿದ್ದು, ಇದನ್ನು ತಕ್ಷಣ ಪಾವತಿ ಮಾಡುವಂತೆ ನೋಟಿಸ್ ನೀಡಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ಹನುಮಂತ ದೇವರ ಹೆಸರಿನಲ್ಲಿ ಸರ್ದಾರ್ ಆಸ್ಪತ್ರೆ ಬಳಿಯ ಬಡಿ ಮತಿಯಾ ಎಂಬಲ್ಲಿ ಮೂರು ಭೂ ಹಿಡುವಳಿಗಳು ಇದ್ದು, ಇವುಗಳ ಆಸ್ತಿ ತೆರಿಗೆಯ ಪೈಕಿ 4.33 ಲಕ್ಷ ರೂಪಾಯಿ ಬಾಕಿ ಇದೆ. ಇದನ್ನು ಪಾವತಿಸುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಈಗಾಗಲೇ ಎರಡು ಬಾರಿ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಭೂ ಹಿಡುವಳಿಗಳ ಮಾಲೀಕರಿಗೆ ನೋಟಿಸ್ ನೀಡಲು ಅವಕಾಶವಿದೆ ಎಂದು ಪಾಲಿಕೆ ಆಯುಕ್ತ ಪ್ರಮೋದ್ ಕುಮಾರ್ ಪಾಲಿಕೆ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಇಲ್ಲಿ ಸುಸ್ತಿ ಜಮೀನು ಹನುಮಂತ ದೇವರ ಹೆಸರಿನಲ್ಲಿದೆ. ಆದ್ದರಿಂದ ಅವರ ಹೆಸರಿಗೆ ನೀಡಿರುವ ನೋಟಿಸನ್ನು ಆಡಳಿತ ಮಂಡಳಿಗೆ ಕಳುಹಿಸಲಾಗಿದೆ ಎಂದು ವಿವರಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ರೋಹ್ಟಾಸ್ ಜಿಲ್ಲೆಯ ಕೆಳ ನ್ಯಾಯಾಲಯ ಹನುಮಂತನಿಗೆ ಕೋರ್ಟ್‌ಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು. ಸುಸ್ತಿದಾರರ ಹೆಸರಿನ ಫಲಕಗಳನ್ನು ನಗರದಲ್ಲಿ ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಈ ನೋಟಿಸ್‌ಗೆ ಹನುಮಂತ ಸ್ಪಂದಿಸದಿದ್ದರೆ ಆ ಹೆಸರನ್ನೂ ಸುಸ್ತಿದಾರರ ಪಟ್ಟಿಯಲ್ಲಿ ಪ್ರದರ್ಶಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.