×
Ad

ಮಂಗಳೂರು ವಿಮಾನ ನಿಲ್ದಾಣಕ್ಕೆ ಡಾ. ಅಂಬೇಡ್ಕರ್ ಹೆಸರಿಡಬೇಕು: ಎಸ್.ಪಿ.ಆನಂದ್

Update: 2016-04-24 13:51 IST

ಮಂಗಳೂರು, ಎ.24: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನಿಡಬೇಕೆಂಬ ನಿರ್ಣಯವನ್ನು ತೆಗೆದುಕೊಳ್ಳುವಂತೆ ಮನವಿಯನ್ನು ಕಳುಹಿಸಬೇಕೆಂದು ದಲಿತ ಮುಖಂಡ ಎಸ್.ಪಿ.ಆನಂದ್ ಆಗ್ರಹಿಸಿದರು.

ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಕೆ.ಎಂ.ಶಾಂತರಾಜು ಮತ್ತು ಅಪರಾಧ ಮತ್ತು ಸಂಚಾರ ಡಿಸಿಪಿ ಡಾ.ಸಂಜೀವ್ ಎಂ ಪಾಟೀಲ್ ನೇತೃತ್ವದಲ್ಲಿ ಇಂದು ಆಯೋಜಿಸಲಾಗಿದ್ದ ದಲಿತ ಕುಂದುಕೊರತೆ ಸಭೆಯಲ್ಲಿ ಈ ಆಗ್ರಹ ಕೇಳಿ ಬಂತು.

ದಲಿತ ಮುಖಂಡ ಎ.ಉದಯಕುಮಾರ್ ಮಾತನಾಡಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು ಪೊಲೀಸ್ ಠಾಣೆಗಳಲ್ಲಿ ದಲಿತರಿಗೆ ನ್ಯಾಯ ಸಿಗುತ್ತಿಲ್ಲ. ದೂರು ನೀಡಲು ಹೋದ ದಲಿತರನ್ನು ನ್ಯಾಯಾಲಯಕ್ಕೆ ಹೋಗುವಂತೆ ಸೂಚಿಸಲಾಗುತ್ತಿದೆ ಎಂದು ಹೇಳಿದರು.ಕಳೆದ ಸಭೆಯಲ್ಲಿ ಉಳ್ಳಾಲ ಠಾಣೆಗೆ ಇನ್ಸ್‌ಪೆಕ್ಟರ್ ಇಲ್ಲದ ಬಗ್ಗೆ ದಲಿತ ಮುಖಂಡರು ಗಮನಸೆಳೆದ ಬಗ್ಗೆ ಉತ್ತರಿಸಿದ ಡಿಸಿಪಿ ಶಾಂತರಾಜು ಅವರು ಉಳ್ಳಾಲ ಠಾಣೆಗೆ ಪಣಂಬೂರು ಠಾಣೆಯ ಇನ್ಸ್‌ಪೆಕ್ಟರ್ ಅವರನ್ನು ಹೆಚ್ಚುವರಿಯಾಗಿ ನೇಮಿಸಲಾಗಿದೆ ಎಂದು ಹೇಳಿದರು.

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ದಲಿತ ಮುಖಂಡ ದಿನೇಶ್ ಕುಮಾರ್ ಉಳ್ಳಾಲ ಠಾಣೆಗೆ ಖಾಯಂ ಇನ್ಸ್‌ಪೆಕ್ಟರ್ ಬೇಕು. ಹೆಚ್ಚುವರಿ ಇನ್ಸ್‌ಪೆಕ್ಟರ್ ಬದಲಿಗೆ ಶೀಘ್ರ ಖಾಯಂ ಇನ್ಸ್‌ಪೆಕ್ಟರ್ ಅವರನ್ನು ನೇಮಿಸಿ. ಉಳ್ಳಾಲ ಸೂಕ್ಞ್ಮ ಪ್ರದೇಶವಾಗಿರುವುದರಿಂದ ಅಲ್ಲಿಗೆ ಖಾಯಂ ಇನ್ಸ್‌ಪೆಕ್ಟರ್ ಅಗತ್ಯವಿದೆ ಎಂದು ಹೇಳಿದರು.ಪಾರ್ವತಿ ಎಂಬವರು ಮಾತನಾಡಿ ಮನೆಯ ಸಮೀಪದಲ್ಲಿ ಹುಡುಗನೊಬ್ಬನಿಗೆ ಹೊಡೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಪೋನ್ ಮಾಡಲು ಒಬ್ಬರು ನನ್ನ ಮೊಬೈಲ್ ತೆಗೆದುಕೊಂಡಿದ್ದರು. ಗಾಂಜಾ ಸೇವಿಸಿ ಹುಡುಗನಿಗೆ ಹೊಡೆಯುತ್ತಿದ್ದಾರೆ ಎಂದು ದೂರು ದಾಖಲಾಗಿತ್ತು. ಆದರೆ ಇದೀಗ ನನ್ನ ಮೊಬೈಲ್ ಪೋನನ್ನು ಮಾತನಾಡಲು ಕೊಟ್ಟ ತಪ್ಪಿಗೆ ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದೇನೆ. ಮನೆಗೆ ದುಷ್ಕರ್ಮಿಗಳು ದಾಳಿ ನಡೆಸುತ್ತಿದ್ದಾರೆ ಎಂದು ಹೇಳಿದರು. ಈ ಬಗ್ಗೆ ದಕ್ಷಿಣ ಎಸಿಪಿಯವರಿಗೆ ಮುಂದಿನ ಸಭೆಯಲ್ಲಿ ಕ್ರಮ ಕೈಗೊಂಡ ಬಗ್ಗೆ ಉತ್ತರ ನೀಡುವಂತೆ ಡಿಸಿಪಿ ಶಾಂತರಾಜು ಸೂಚಿಸಿದರು.

ಕಳೆದ ಸಭೆಯಲ್ಲಿ ಶೌಚಾಲಯ ಗುಂಡಿಯನ್ನು ಮಾನವರನ್ನು ಬಳಸಿ ಸ್ವಚ್ಚ ಮಾಡುತ್ತಿರುವ ಬಗ್ಗೆ ಮಾಡಿದ ಆರೋಪದ ಬಗ್ಗೆ ಉತ್ತರಿಸಿದ ಡಿಸಿಪಿ ಶಾಂತರಾಜು ಈ ಬಗ್ಗೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.ಸುಮಿತ್ರಾ ಉಮೇಶ್ ಅವರು ತಾವು ನೀಡಿದ ದಲಿತ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ರಮಕೈಗೊಳ್ಳದಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದಾಗ ಈ ಬಗ್ಗೆ ಮದ್ಯಾಹ್ನದೊಳಗೆ ಪ್ರಕರಣ ದಾಖಲಿಸಿ ವರದಿ ನೀಡುವಂತೆ ಡಿಸಿಪಿ ಶಾಂತರಾಜು ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಸೂಚಿಸಿದರು.

ಕರ್ಕಸ ಹಾರ್ನ್, ಅತಿವೇಗ ಚಲಾವಣೆ ಪ್ರಕರಣ ದಾಖಲುನಗರದಲ್ಲಿ ವಾಹನಗಳು ಅತಿವೇಗ ಮತ್ತು ಕರ್ಕಸ ಹಾರ್ನ್‌ಗಳನ್ನು ಹಾಕುವ ಬಗ್ಗೆ ಕಳೆದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಂದು ಸಂಚಾರಿ ಎಸಿಪಿಯವರು ಕರ್ಕಸ ಹಾರ್ನ್ ಮತ್ತು ಅತಿವೇಗದಲ್ಲಿ ಸಂಚರಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿರುವ ಬಗ್ಗೆ ಮಾಹಿತಿ ನೀಡಿದರು. ಅತಿವೇಗವಾಗಿ ಸಂಚರಿಸಿದ 325 ವಾಹನಗಳಿಗೆ 500 ರೂ. ದಂಡವನ್ನು ಹಾಕಿ ಪ್ರಕರಣ ದಾಖಲಿಸಲಾಗಿದೆ ಮತ್ತು 461 ವಾಹನಗಳಿಗೆ ಕರ್ಕಸ ಹಾರ್ನ್ ಹಾಕಿರುವುದಕ್ಕೆ 800 ರೂ ದಂಡವನ್ನು ವಿಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಸಭೆಗೆ ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News