ಸ್ನಾತಕೋತ್ತರ ಪದವಿ ಪರೀಕ್ಷೆಗೆ ಹಾಜರಾದ 97ರ ಯುವಕ!

Update: 2016-04-24 12:19 GMT

ಪಟ್ನಾ: ನಳಂದ ಮುಕ್ತ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರೀಕ್ಷೆಗೆ ಹಾಜರಾದ "ಯುವಕ" ಎಲ್ಲರ ಹುಬ್ಬೇರಿಸಿದ್ದಾನೆ. 1938ರಲ್ಲಿ ಪದವಿ ಪಡೆದಿದ್ದ ಉತ್ಸಾಹದ ಚಿಲುಮೆ ರಾಜ್‌ಕುಮಾರ್ ವೈಶ್ಯ ಇತ್ತೀಚೆಗೆ ತಮ್ಮ 97ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ತಿಳಿಬಣ್ಣದ ಶರ್ಟ್ ಹಾಗೂ ಕಡು ಬಣ್ಣದ ಪ್ಯಾಂಟಿನೊಂದಿಗೆ ಪರೀಕ್ಷಾ ಕೊಠಡಿಗೆ ಬಂದು ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ ಪರೀಕ್ಷೆಯ ಭಾಗ- 1ನ್ನು ಇಂಗ್ಲಿಷ್‌ನಲ್ಲಿ ಬರೆದು ಅಚ್ಚರಿ ಮೂಡಿಸಿದರು. 23 ಪುಟಗಳ ಉತ್ತರ ಬರೆದರು.

ಪರೀಕ್ಷಾ ಕೊಠಡಿಯಲ್ಲಿ ಇತರರಂತೆ ಮೂರು ಗಂಟೆ ಕಾಲ ಕುಳಿತುಕೊಂಡು ಗಂಭೀರವಾಗಿ ಪರೀಕ್ಷೆ ಬರೆದರು. ಪರೀಕ್ಷೆಗೆ ಹಾಜರಾದ ಅವರ ಸಹಪಾಠಿಗಳು ಅವರ ಮೊಮ್ಮಕ್ಕಳಿಗಿಂತಲೂ ಕಿರಿಯ ವಯಸ್ಸಿನವರು ಎಂದು ಅಧಿಕಾರಿಗಳು ಹೇಳಿದ್ದಾರೆ. ವೈಶ್ಯ ಕಳೆದ ವರ್ಷ ಎರಡು ಕಾರಣಗಳಿಗಾಗಿ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿಗೆ ನೊಂದಾಯಿಸಿಕೊಂಡಿದ್ದರು. ಸ್ನಾತಕೋತ್ತರ ಪದವೀಧರರಾಗಬೇಕೆಂಬ ಧೀರ್ಘಕಾಲದ ಆಸೆ ಈಡೇರಿಸಿಕೊಳ್ಳುವುದು ಒಂದು ಕಾರಣವಾದರೆ ಭಾರತ ಬಡತನದಂಥ ಸಮಸ್ಯೆಯನ್ನು ಬಗೆಹರಿಸಲು ಯಾಕೆ ವಿಫಲವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಎರಡನೆಯದು.

ಈಗ ನಾನು ಪರೀಕ್ಷೆಗೆ ಹಾಜರಾಗಿದ್ದು, ನನ್ನ ಆಸೆ ಈಡೇರುವ ಹಂತದಲ್ಲಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. 1920ರ ಏಪ್ರಿಲ್ 1ರಂದು ಜನಿಸಿದ ವೈಶ್ಯ, ಆಗ್ರಾ ವಿವಿಯಿಂದ 1938ರಲ್ಲಿ ಪದವಿ ಪಡೆದಿದ್ದರು. 1940ರಲ್ಲಿ ಕಾನೂನು ಪದವಿಯನ್ನೂ ಪಡೆದರು. ಕುಟುಂಬದ ಜವಾಬ್ದಾರಿ ಹೆಚ್ಚಿದ ಕಾರಣದಿಂದ ಮುಂದೆ ಸ್ನಾತಕೋತ್ತರ ಪದವಿ ಪಡೆಯುವುದು ಸಾಧ್ಯವಾಗಲಿಲ್ಲ ಎಂದು ಅವರು ವಿವರಿಸುತ್ತಾರೆ.

ಪತ್ನಿ ಕಾಲವಾದ ಬಳಿಕ 10 ವರ್ಷಗಳಿಂದ ತಮ್ಮ ಎರಡನೇ ಮಗನ ಜತೆ ವೈಶ್ಯ ವಾಸವಾಗಿದ್ದಾರೆ. ಪಾಟ್ನಾ ಎನ್‌ಐಟಿನಿಂದ ನಿವೃತ್ತರಾದ ಮಗ ಹಾಗೂ ಪಾಟ್ನಾ ವಿವಿಯಿಂದ ನಿವೃತ್ತರಾದ ಸೊಸೆ ಇವರ ಸ್ನಾತಕೋತ್ತರ ಪದವಿ ಆಸೆಗೆ ಬೆಂಗಾವಲಾಗಿ ನಿಂತಿದ್ದಾರೆ. ನಳಂದ ವಿವಿಯಲ್ಲಿ 84 ವರ್ಷದ ಒಬ್ಬರು ಪಿಎಚ್‌ಡಿ ಪದವಿಗಾಗಿಯೂ ಹೆಸರು ನೊಂದಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News