ರಾಜ್ಯದ ಜಾನಪದ ಪ್ರಕಾರಗಳ ಕ್ರೋಡೀಕರಣ: ಡಾ.ಚಿನ್ನಪ್ಪ ಗೌಡ

Update: 2016-04-24 14:41 GMT

ಉಡುಪಿ, ಎ.24: ಸಾಂಸ್ಕೃತಿಕ ಹಾಗೂ ವೈಯಕ್ತಿಕವಾಗಿ ರಾಜ್ಯದ ವಿವಿಧೆಡೆ ಗಳಲ್ಲಿ ಸಂಗ್ರಹಿಸಿಡಲಾಗಿರುವ ವಿವಿಧ ಜಾನಪದ ಪ್ರಕಾರಗಳನ್ನು ಕ್ರೋಢಿಕರಿಸಿ ಸಂರಕ್ಷಿಸುವ ಮೂಲಕ ಅಧ್ಯಯನಕ್ಕೆ ಒದಗಿಸುವ ಯೋಜನೆಯನ್ನು ಜಾನಪದ ವಿಶ್ವವಿದ್ಯಾನಿಲಯ ಹಮ್ಮಿಕೊಂಡಿದೆ ಎಂದು ಹಾವೇರಿಯಲ್ಲಿರುವ ಕರ್ನಾಟಕ ಜಾನಪದ ವಿವಿಯ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಹೇಳಿದ್ದಾರೆ.

ಉಡುಪಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ, ಉಡುಪಿ ತುಳುಕೂಟ ಮತ್ತು ಮುಂಬೈ ಸಾಹಿತ್ಯ ಬಳಗದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಮಿಷನ್ ಕಂಪೌಂಡಿನ ಜಗನ್ನಾಥ ಸಭಾಭವನದಲ್ಲಿ ರವಿವಾರ ಆಯೋಜಿಸ ಲಾದ ಡಾ.ಪಿ.ಸುಶೀಲಾ ಉಪಾಧ್ಯಾಯರ(ಕ್ಷೇತ್ರಕಾರ್ಯ ಸಂಗ್ರಹ ಪಾಡ್ದಾನಗಳ ಪ್ರಸ್ತುತಿ) ತುಳು ಪಾಡ್ದಾನ ಧ್ವನಿಮುದ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಹೊಸ ದಾಖಲಾತಿ ಮಾಡುವುದರ ಜೊತೆಗೆ ಈ ಹಳೆಯ ಜಾನಪದ ದಾಖಲಾತಿಗಳನ್ನು ಸಂಗ್ರಹಿಸಿ ಸಂರಕ್ಷಿಸಬೇಕಾಗಿದೆ. ಅವುಗಳ ಪ್ರತಿ ಮಾಡಿ ವಿವಿಯಲ್ಲಿ ಸಂಗ್ರಹಿಸಿ ಅಧ್ಯಯನಕ್ಕೆ ಒದಗಿಸುವುದು ನಮ್ಮ ಮುಖ್ಯ ಉದ್ದೇಶ ವಾಗಿದೆ. ಇದಕ್ಕೆ ಆರ್ಥಿಕ ಸಂಪನ್ಮೂಲವನ್ನು ಕ್ರೋಡೀಕರಿಸಲಾಗುತ್ತಿದ್ದು, ಸರಕಾರದ ಅನುದಾನಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಜಾನಪದ ವಿವಿಯನ್ನು ಸಾಂಪ್ರದಾಯಿಕ ವಿವಿಯಾಗಿ ಮಾಡುವುದರ ಜೊತೆಗೆ ಜಾನಪದದ ವಿವಿಧ ಪ್ರಕಾರಗಳ ದಾಖಲಾತಿ, ಸಂರಕ್ಷಣೆ, ಅಧ್ಯಯನ ಕೇಂದ್ರವಾಗಿ ಬೆಳೆಸಬೇಕಾಗಿರುವುದು ಅತಿ ಅಗತ್ಯವಾಗಿದೆ ಎಂದ ಅವರು, ವಿವಿಯ ಕಟ್ಟಡ ಹಾಗೂ ಮೂಲಭೂತ ಸೌಕರ್ಯಕ್ಕೆ ಸರಕಾರ 25ಕೋಟಿ ರೂ. ಹಾಗೂ ವಿವಿಧ ಸಂಶೋಧನಾ ಯೋಜನೆಗಳಿಗೆ 10ಕೋಟಿ ರೂ. ವಿನಿಯೋಗಿಸಿದೆ ಎಂದು ಹೇಳಿದರು.

 ನಮ್ಮ ಜಾನಪದ ಸಂಪತ್ತನ್ನು ಮುಂದಿನ ಪೀಳಿಗೆಗೆ ದಾಟಿಸುವುದು ಹೇಗೆ ಎಂಬುದು ನಮ್ಮ ಮುಂದೆ ಇರುವ ದೊಡ್ಡ ಸವಾಲಾಗಿದೆ. ಮಾತುಗಳಲ್ಲಿ ಅವುಗಳನ್ನು ದಾಟಿಸುವ ಕಾರ್ಯ ನಡೆಯುತ್ತಿದೆ. ಅದೇ ರೀತಿ ಸಾಕಷ್ಟು ಪರಿ ಣಾಮಕಾರಿಯಾಗಿರುವ ಶ್ರಾವ್ಯ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ನೋಡುಗರ ಅನುಭವಕ್ಕೆ ಬರುವ ರೀತಿಯಲ್ಲಿ ದಾಟಿಸುವ ಕಾರ್ಯ ಆಗ ಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ದೇಶಿ ಹಾಗೂ ವಿದೇಶಿ ವಿದ್ವಾಂಸರುಗಳು ತುಳು ಜಾನಪದ ಕ್ಷೇತ್ರಗಳಲ್ಲಿ ಜ್ಞಾನದ ಶಿಸ್ತುಗಳನ್ನು ಬಳಸಿಕೊಂಡು ಸಾಕಷ್ಟು ಕೆಲಸ ಮಾಡಿದ್ದಾರೆ. ಇದ ರಿಂದಲೇ ತುಳುವಿನ ಜಾನಪದ ಅಧ್ಯಯನ ಕಾರ್ಯವು ಅತ್ಯಂತ ವ್ಯವಸ್ಥಿತ ವಾಗಿ ಹಾಗೂ ವೈಜ್ಞಾನಿಕವಾಗಿ ಬೆಳೆದು ಬಂದು ಸಂಪಾದನೆ, ಸಂಗ್ರಹ, ಪ್ರಕಟಣೆ, ವಿಶ್ವೇಷಣೆಗಳ ಮೂಲಕ ನಮ್ಮ ಮುಂದೆ ಇದೆ ಎಂದು ಅವರು ತಿಳಿಸಿದರು.

ಪ್ರಾಚ್ಯಸಂಚಯ ‘ಭಾಷೆ-ಕೋಶ ಪ್ರಸಾರಾಂಗ’ ಡೈರಕ್ಟರ್ ಆಫ್ ಸ್ಟಡೀಸ್‌ನ ನಿರ್ದೇಶಕರಾಗಿ ನೇಮಿಕಗೊಂಡ ಭಾಷಾ ವಿಜ್ಞಾನಿ ಡಾ.ಯು.ಪಿ.ಉಪಾ ಧ್ಯಾಯರಿಗೆ ಪದಗ್ರಹಣ ನೆರವೇರಿಸಲಾಯಿತು. ಡಾ.ಪಿ.ಸುಶೀಲಾ ಉಪಾ ಧ್ಯಾಯ ಸ್ಮರಣಾರ್ಥ ತುಳುನಾಡಿನ ಪಾಡ್ದನ ಹೇಳುವ ಮೂಲ ಗಾಯಕಿಯ ರಾದ ಅಮ್ಮಣ್ಣಿ ಡಂಗು ಪಾಣಾರ ಹಾಗೂ ಸುಂದರಿ ಓಂತಿಬೆಟ್ಟು ಅವರಿಗೆ ‘ಪಾಡ್ದನ ಬೊಳ್ಳಿ’ ಪುರಸ್ಕಾರ ಪ್ರದಾನ ಮಾಡಲಾಯಿತು.

ವಿದ್ಯಾರ್ಥಿಗಳಿಗೆ ಪಾಡ್ದಾನ, ಸಂಧಿ, ಕಬಿತೆ ಹೇಳುವ ಕಾರ್ಯಕ್ರಮ ವನ್ನು ಇದೇ ಸಂದರ್ಭದಲ್ಲಿ ಏರ್ಪಡಿಸಲಾಯಿತು. ಅತಿಥಿಗಳಾಗಿ ಮಂಗಳೂರು ಆಕಾಶವಾಣಿ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕೇಂದ್ರದ ಅಧ್ಯಕ್ಷ ನಾಡೋಜ ಕೆ.ಪಿ.ರಾವ್ ಉಪಸ್ಥಿತರಿದ್ದರು.

ಜಾನಪದ ವಿವಿಯ ಸಿಂಡಿಕೇಟ್ ಸದಸ್ಯ ಪ್ರೊ.ಎಸ್.ಎ.ಕೃಷ್ಣಯ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಕಾತ್ಯಾಯಿನಿ ಕುಂಜಿಬೆಟ್ಟು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News