ಸರಕಾರವು ಬೀದಿಯಲ್ಲಿ ವಿರೋಧ ಎದುರಿಸಲಿದೆ: ಕನ್ಹಯ್ಯ

Update: 2016-04-24 17:41 GMT

ಹೊಸದಿಲ್ಲಿ, ಎ.24: ಆರೆಸ್ಸೆಸ್ ಹಾಗೂ ಬಿಜೆಪಿಗಳನ್ನು ವಸಾಹತುಶಾಹಿ ಬ್ರಿಟಿಶ್ ಸರಕಾರಕ್ಕೆ ಹೋಲಿಸಿದ ಅಲಹಾಬಾದ್ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ರಿಚಾ ಸಿಂಗ್, 1942ರಲ್ಲಿ ಭಾರತ ಬಿಟ್ಟು ತೊಲುಗವಂತೆ ಬ್ರಿಟಿಶರಿಗೆ ಹೇಳಿದ್ದ ಸ್ಥಳ ಮುಂಬೈ ಆಗಿತ್ತು. ಇಂದು ತಾನು ಆರಸ್ಸೆಸ್ ಹಾಗೂ ಬಿಜೆಪಿಗಳಿಗೆ ಭಾರತ ಬಿಟ್ಟು ತೊಲುಗವಂತೆ ಹೇಳುತ್ತಿದ್ದೇನೆ ಎಂದಿದ್ದಾರೆ.

ನಗರದ ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳು ಏರ್ಪಡಿಸಿದ ಭರ್ಜರಿ 6 ತಾಸುಗಳ ರ್ಯಾಲಿಯೊಂದರಲ್ಲಿ ಮಾತನಾಡಿದ ಐವರು ವಿದ್ಯಾರ್ಥಿ ನಾಯಕರಲ್ಲಿ ಅವರೂ ಒಬ್ಬರಾಗಿದ್ದರು.
ಸರಕಾರಕ್ಕೆ ಸಂಸತ್ತಿನಲ್ಲಿ ಯಾವುದೇ ವಿರೋಧ ಪಕ್ಷ ಇಲ್ಲದಿರುತ್ತಿದ್ದರೆ, ಅದು ರಸ್ತೆಗಳಲ್ಲಿ ವಿರೋಧ ಎದುರಿಸುವುದನ್ನು ತಾನು ಖಚಿತ ಪಡಿಸುತ್ತಿದ್ದೇನೆಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಹೇಳಿದ್ದಾರೆ.
ಎಲ್ಲ ವಿದ್ಯಾರ್ಥಿ ನಾಯಕರೂ ಅಲ್ಪಸಂಖ್ಯಾತರು ಹಾಗೂ ಸಮಾಜದ ದುರ್ಬಲ ವರ್ಗದ ವಿರುದ್ಧ ಸರಕಾರ ತಾರತಮ್ಯ ತೋರಿಸುತ್ತಿದೆಯೆಂದು ಆರೋಪಿಸಿದ್ದು, ಕೇಂದ್ರ ಸರಕಾರವನ್ನು ಬಲವಾಗಿ ಟೀಕಿಸಿದ್ದಾರೆ.
 ಸಮಾನ ಉದ್ದೇಶಕ್ಕಾಗಿ ಒಂದಾಗುವ ಅಗತ್ಯವನ್ನು ಒತ್ತಿ ಹೇಳಿದ ಎಫ್‌ಟಿಐಐ ವಿದ್ಯಾರ್ಥಿ ಸಂಘದ ಹರಿಕೃಷ್ಣನ್ ನಾಚಿ ಮುತ್ತು, ನಾವೊಂದು ಸಾಮಾನ್ಯ ಕಾರ್ಯಕ್ರಮ ಹೊಂದಬೇಕು. ಆ ಬಗ್ಗೆ ಎಲ್ಲ ವಿದ್ಯಾರ್ಥಿ ಸಂಘಟನೆಗಳು ಕೆಲಸ ಮಾಡುವಂತಾಗಬೇಕು. ಪರಸ್ಪರ ಭಿನ್ನಾಭಿಪ್ರಾಯ ಗಳನ್ನು ಚರ್ಚಿಸುವ ಹಾಗೂ ಟೀಕಿಸುವ ಸಾಮರ್ಥ್ಯ ಹೊಂದಿರಬೇಕೆಂದು ಹೇಳಿದ್ದಾರೆ. ಮೇ.5ರಂದು ರಾಷ್ಟ್ರೀಯ ವಿದ್ಯಾರ್ಥಿ ಸಮ್ಮೇಳನವೊಂದು ನಿಗದಿಯಾಗಿದೆ. ಸಮ್ಮೇಳನದಲ್ಲಿ ನಾವು ರೋಹಿತ್ ಕಾಯ್ದೆಯ ಕರಡೊಂದನ್ನು ಸೃಷ್ಟಿಸಲಿದ್ದೇವೆ. ಅದನ್ನು ವಿದ್ಯಾರ್ಥಿ ಸಂಸತ್ತಿನಲ್ಲಿ ಮಂಜೂರು ಮಾಡಲಿದ್ದೇವೆ. ಆ ಬಳಿಕ ಅದು ರಾಷ್ಟ್ರದ ಸಂಸತ್ತಿನಲ್ಲಿ ಮಂಜೂರಾಗುವಂತೆ ಹೋರಾಟ ನಡೆಸಲಿದ್ದೇವೆ. ಭಾರತದ ವಿಶ್ವವಿದ್ಯಾನಿಲಯಗಳನ್ನು ಹಾಗೂ ಬ್ರಾಹ್ಮಣ್ಯ ಹಾಗೂ ಮನುವಾದದಿಂದ ಮುಕ್ತಗೊಳಿಸುವ ಒಟ್ಟು ಗುರಿ ತಮ್ಮದಾಗಿದೆಯೆಂದು ಕನ್ಹಯ್ಯಾ ಪ್ರತಿಪಾದಿಸಿದ್ದಾರೆ. ಕ್ಯಾಂಪಸ್‌ಗೆ ಸೀಮಿತರಾಗುವುದರ ಆಚೆಗೆ ನಡೆದು, ಜನರನ್ನು ತಲುಪುವ ಅಗತ್ಯವನ್ನು ವಿದ್ಯಾರ್ಥಿ ನಾಯಕರು ಒತ್ತಿ ಹೇಳಿದ್ದಾರೆ. ತಾವು ತಮ್ಮ ಸಮಾಜದ ತೀರಾ ಸಣ್ಣ ಪ್ರಾತಿನಿಧ್ಯವನ್ನು ನೋಡುತ್ತಿದ್ದೇವೆ. ವಿದ್ಯಾರ್ಥಿ ಸಂಘವೇ ಇಲ್ಲದ ಅನೇಕ ವಿವಿಗಳಿವೆ. ಒಂದು ಸಂಘವನ್ನು ರಚಿಸ ಬಯಸಿದರೆ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಾರೆಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಶೆಹ್ಲಾ ರಶೀದ್ ಆರೋಪಿಸಿದ್ದಾರೆ. ಭಾರೀ ಚಳವಳಿಯೊಂದರ ಹೊರತು ತಾವು ತಮ್ಮ ಗುರಿ ತಲುಪುಲಾರೆವು. ಜನರಲ್ಲಿ ಪ್ರಜ್ಞೆ ಹೆಚ್ಚಿಸು ವ ಕ್ರಮವನ್ನು ನಾವು ಕೈಗೊಳ್ಳುತ್ತಿದ್ದೇವೆ. ನಾವು ತೆಲಂಗಾಣದ ಪ್ರತಿ ಜಿಲ್ಲೆಯನ್ನು ಹಾದು ಹೋಗುವ ಬಸ್ ರ್ಯಾಲಿಯೊಂದನ್ನು ನಡೆಸಿದ್ದೇವೆ. ಹಾಗೂ 50ಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡಿದ್ದೇವೆ. ಜನರು ಸ್ಥಳೀಯವಾಗಿ ಸಂಘಟಿತರಾಗಬೇಕು ಹಾಗೂ ದೊಡ್ಡ ಚಳವಳಿಯ ಭಾಗವಾಗಬೇಕೆಂದು ನಾವು ನಂಬಿದ್ದೇವೆಂದು ಹೈದರಾಬಾದ್ ಕೇಂದ್ರೀಯ ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಝುಹೈಲ್ ಕೆ.ಪಿ. ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News