×
Ad

ರಾಮ್‌ದೇವ್ ಫುಡ್‌ಪಾರ್ಕ್‌ಗೆಸಿಐಎಸ್‌ಎಫ್ ಭದ್ರತೆ

Update: 2016-04-24 23:28 IST

ಹೊಸದಿಲ್ಲಿ,ಎ.24: ಹರಿದ್ವಾರದಲ್ಲಿರುವ ಯೋಗಗುರು ರಾಮ್‌ದೇವ್ ಅವರ ಫುಡ್‌ಪಾರ್ಕ್‌ಗೆ ದಿನದ 24 ಗಂಟೆಗಳ ಕಾಲವೂ ಅರೆ ಮಿಲಿಟರಿ ಪಡೆ ಸಿಐಎಸ್‌ಎಫ್ ಭದ್ರತೆಯನ್ನು ಒದಗಿಸಲಾಗಿದ್ದು, ಸುಮಾರು ಮೂರು ಡಝನ್ ಶಸ್ತ್ರಸಜ್ಜಿತ ಕಮಾಂಡೋಗಳನ್ನು ಅಲ್ಲಿ ನಿಯೋಜಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಈ ವರ್ಷದ ಮಾ.22ರಿಂದ ಫುಡ್‌ಪಾರ್ಕ್‌ನ ಭದ್ರತೆಯ ಹೊಣೆಗಾರಿಕೆಯನ್ನು ಸಿಐಎಸ್‌ಎಫ್ ವಹಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇನ್ಫೋಸಿಸ್‌ನಂತಹ ಬೆರಳೆಣಿಕೆಯ ಖಾಸಗಿ ಸಂಸ್ಥೆಗಳಿಗಷ್ಟೇ ಕೇಂದ್ರವು ಈವರೆಗೆ ಇಂತಹ ಭದ್ರತೆಯನ್ನೊದಗಿಸಿತ್ತು.
 ಈ ಸೇವೆಗಾಗಿ ಪತಂಜಲಿ ಫುಡ್ ಆ್ಯಂಡ್ ಹರ್ಬಲ್ ಪಾರ್ಕ್‌ಗೆ ವಾರ್ಷಿಕ ಅಂದಾಜು 40 ಲಕ್ಷ ರೂ.ಶುಲ್ಕವನ್ನು ವಿಧಿಸಲಾಗಿದ್ದು,ಜೊತೆಗೆ ಭದ್ರತಾ ಸಿಬ್ಬಂದಿಗಳ ವಸತಿಗಾಗಿ ಬ್ಯಾರಕ್‌ಗಳು,ವಾಹನ ಇತ್ಯಾದಿಗಳನ್ನು ಸಂಸ್ಥೆಯೇ ಒದಗಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಕಳೆದ ವರ್ಷದ ಮಧ್ಯಭಾಗದಲ್ಲಿ ಸಂಸ್ಥೆಯಲ್ಲಿ ಪ್ರತಿಭಟನೆಗಳು ನಡೆದಿದ್ದಾಗ ತಾತ್ಕಾಲಿಕವಾಗಿ ಸಿಐಎಸ್‌ಎಫ್ ತುಡಿಯನ್ನು ಅಲ್ಲಿ ನಿಯೋಜಿಸಲಾಗಿತ್ತು. ಸಂಭಾವ್ಯ ಭದ್ರತಾ ಬೆದರಿಕೆಗಳ ಹಿನ್ನೆಲೆಯಲ್ಲಿ ಖಾಯಂ ಭದ್ರತೆಯನ್ನು ಒದಗಿಸುವಂತೆ ಈ ವರ್ಷದ ಆರಂಭದಲ್ಲಿ ಗೃಹ ಸಚಿವಾಲಯವು ಆದೇಶಿಸಿತ್ತು.
ಕೇಂದ್ರ ಸರಕಾರವು ಖಾಸಗಿ ಕ್ಷೇತ್ರಕ್ಕೆ ಪೂರ್ಣಕಾಲಿಕ ಸಿಐಎಸ್‌ಎಫ್ ಭದ್ರತೆಯನ್ನೊದಗಿಸುವುದು ಅಪರೂಪವಾಗಿದ್ದು, ಇದು ಇಂತಹ ಎಂಟನೆ ನಿಯೋಜನೆಯಾಗಿದೆ.
2008ರ ಮುಂಬೈ ದಾಳಿಗಳ ಬಳಿಕ ಮೊದಲ ಬಾರಿಗೆ ಸಿಐಎಸ್‌ಎಫ್‌ನ್ನು ಖಾಸಗಿ ಕ್ಷೇತ್ರದಲ್ಲಿ ಭದ್ರತೆಗೆ ನಿಯೋಜಿಸಲಾಗಿತ್ತು.
ಸಾವಿರಾರು ಕೋಟಿ ರೂ.ಗಳ ಉದ್ಯಮ ಸಾಮ್ರಾಜ್ಯವನ್ನು ಹೊಂದಿರುವ ರಾಮ್‌ದೇವ್ ವೈಯಕ್ತಿಕವಾಗಿ ‘ಝಡ್’ಭದ್ರತೆಯನ್ನು ಹೊಂದಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News