ನೀರು ಉಳಿತಾಯದ ಸಾಮೂಹಿಕ ಅಭಿಯಾನಕ್ಕೆ ಪ್ರಧಾನಿ ಕರೆ
ಹೊಸದಿಲ್ಲಿ, ಎ.24: ದೇಶದ ವಿವಿಧ ಭಾಗಗಳಲ್ಲಿ ತಾಂಡವವಾಡುತ್ತಿರುವ ಬರ ಪರಿಸ್ಥಿತಿಯ ಕುರಿತು ಕಳವಳ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಸಾಮೂಹಿಕ ಚಳವಳಿಯ ಮೂಲಕ ನೀರಿನ ರಕ್ಷಣೆಯ ಬಗ್ಗೆ ಒತ್ತಿ ಹೇಳಿದ್ದಾರೆ. ಈ ಹಂಗಾಮಿನಲ್ಲಿ ಮೂನ್ಸೂಚನೆ ನೀಡಲಾಗಿರುವ ಶೇ.110 ಮಳೆಯ ಕುರಿತು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.
ತನ್ನ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕೀ ಬಾತ್’ನಲ್ಲಿ ಗಂಗಾ ಹಾಗೂ ಯಮುನಾ ನದಿಗಳ ಶುದ್ಧೀಕರಣ ಪ್ರಯತ್ನದ ಕುರಿತು ಮಾತನಾಡಿದ್ದು, ಈ ಪ್ರಯತ್ನ ಕೆಲವು ಸಮಯದ ಬಳಿಕ ಫಲ ನೀಡಬಹುದೆಂದು ಆಶಿಸಿದ್ದಾರೆ.
ಶಿಕ್ಷಣದ ಕುರಿತು ಮಾತನಾಡಿದ ಪ್ರಧಾನಿ, ಈಗ ದಾಖಲಾತಿಯಿಂದ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಪಲ್ಲಟವಾಗಬೇಕು ಎಂದಿದ್ದಾರೆ.
ತನ್ನ 30 ನಿಮಿಷಗಳ ಭಾಷಣದಲ್ಲಿ ಪ್ರಧಾನಿ ಮೋದಿ, ತನ್ನ ಕರೆಯಂತೆ ಎಲ್ಪಿಜಿ ಸಬ್ಸಿಡಿ ತ್ಯಜಿಸಿದ ಒಂದು ಕೋಟಿ ಕುಟುಂಬಗಳಿಗೆ ಕೃತಜ್ಞತೆ ಸಲ್ಲಿಸಿದ್ದು, ಮಾಧ್ಯಮಗಳನ್ನು ಧನಾತ್ಮಕ ಸುದ್ದಿಗಳನ್ನು ನೀಡುವಂತೆ ಹುರಿದುಂಬಿಸಿದ್ದಾರೆ.
ದೇಶದ ವಿವಿಧ ಭಾಗಗಳ ಬರ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಮುಖ್ಯವಾಗಿ ಸುದೀರ್ಘ ಕಾಲದ ಬರದಿಂದಾಗಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿದಿರುವ ಸಂದರ್ಭದಲ್ಲಿ ಈ ಕುರಿತು ಕಳವಳ ಸಹಜವಾದುದು. ಬರ ಮತ್ತು ನೀರಿನ ಅಭಾವದ ಪರಿಣಾಮವನ್ನು ದೂರ ಮಾಡಲು ಸರಕಾರಗಳು ತಮ್ಮ ಕೆಲಸವನ್ನು ಮಾಡುತ್ತಿವೆ. ಜನರೂ ತಮ್ಮದೇ ಪ್ರಯತ್ನ ಮಾಡುತ್ತಿರುವುದನ್ನು ತಾನು ಕಂಡಿದ್ದೇನೆ. ಅನೇಕ ಗ್ರಾಮಗಳಲ್ಲಿ ನೀರಿನ ವೌಲ್ಯದ ಕುರಿತು ಜಾಗೃತಿ ಕಾಣಿಸಿಕೊಳ್ಳತೊಡಗಿದೆ. ಅಂತಹ ಗ್ರಾಮದಲ್ಲಿ ಸೂಕ್ಷ್ಮತೆ ಹಾಗೂ ನೀರು ಉಳಿತಾಯದ ಕುರಿತು ಬದ್ಧತೆ ಮೂಡಿದೆಯೆಂದು ಹೇಳಿದ್ದಾರೆ.
ಈ ಮುಂಗಾರಿನಲ್ಲಿ ದೇಶವು ಶೇ.106ರಿಂದ 110ರ ತನಕ ಮಳೆಯನ್ನು ಪಡೆಯಲಿದೆಯೆಂಬ ಹವಾಮಾನ ಮೂನ್ಸೂಚನೆಯನ್ನು ಉಲ್ಲೇಖಿಸಿದ ಪ್ರಧಾನಿ, ಅಂತಹ ಒಳ್ಳೆಯ ಸುದ್ದಿ ಸದಾ ಶಾಂತಿ ತರುತ್ತದೆ ಎಂದಿದ್ದಾರೆ.
ಆದರೆ, ಈ ಸುದ್ದಿ ಹೊಸ ಜಾಗೃತಿಯನ್ನೂ ತರುತ್ತದೆ. ಉತ್ತಮ ಮಳೆಯ ಕುರಿತಾದ ಸುದ್ದಿ ಆರಾಮವನ್ನು ನೀಡುವುದರೊಂದಿಗೆ, ಒಂದು ಸವಾಲು ಹಾಗೂ ಅವಕಾಶವನ್ನೂ ತರುತ್ತದೆ. ನಾವು ನೀರನ್ನುಳಿಸುವ ಕುರಿತು ಗ್ರಾಮದಿಂದ ಗ್ರಾಮಕ್ಕೆ ಅಭಿಯಾನವೊಂದನ್ನು ನಡೆಸಬಲ್ಲೆವೇ? ಸಾಧ್ಯವಿರುವಷ್ಟು ನಾವು ನೀರನ್ನು ಉಳಿಸಲೇಬೇಕು ಎಂದವರು ತಿಳಿಸಿದ್ದಾರೆ.
ಮಳೆಯ ನೀರನ್ನು ಸಂರಕ್ಷಿಸಬೇಕು. ಒಂದು ಗ್ರಾಮದ ನೀರು ಅದೇ ಗ್ರಾಮದಲ್ಲಿ ಉಳಿಯಬೇಕು. ನಾವು ಈ ಕುರಿತು ಪಣ ತೊಟ್ಟೆವಾದರೆ, ಇದು ಸಾರ್ವತ್ರಿಕ ಅಭಿಯಾನವೊಂದರ ಮೂಲಕ ಸಾಧ್ಯ. ಆದುದರಿಂದ, ನಾವೀಗ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದರೂ, ನಾವು ಸಿದ್ಧರಾಗಲು ಒಂದೂವರೆ ತಿಂಗಳಿದೆಯೆಂದು ಪ್ರಧಾನಿ ಹೇಳಿದ್ದಾರೆ.