ಭಾರತೀಯರ ಉಚ್ಚಾರಣೆಯನ್ನು ಅರ್ಥಮಾಡಿಕೊಳ್ಳುವುದು ಭಾರೀ ಕಷ್ಟ: ಅಮೆರಿಕದ ಮೇನ್ ರಾಜ್ಯದ ರಾಜ್ಯಪಾಲ
ಆಗಸ್ಟ (ಅಮೆರಿಕ), ಎ. 24: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಡೊನಾಲ್ಡ್ ಟ್ರಂಪ್ ಮೊನ್ನೆಯಷ್ಟೇ ಭಾರತೀಯರ ಇಂಗ್ಲಿಷ್ ಉಚ್ಚಾರಣೆಯನ್ನು ವ್ಯಂಗ್ಯವಾಡಿದ್ದರು. ಅದಾದ ಒಂದು ದಿನದ ಬಳಿಕ ನಿನ್ನೆ, ಅಮೆರಿಕದ ಮೇನ್ ರಾಜ್ಯದ ರಿಪಬ್ಲಿಕನ್ ಪಕ್ಷದವರೇ ಆದ ರಾಜ್ಯಪಾಲ ಪೌಲ್ ಲೆಪೇಜ್ ಭಾರತೀಯರನ್ನು ನಿಂದಿಸುವಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ! ಭಾರತೀಯ ಕೆಲಸಗಾರರ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದು ‘‘ಭಾರೀ ಕಷ್ಟ’’ ಹಾಗೂ ಅದು ‘‘ಅತ್ಯಂತ ಕೆಟ್ಟ ಅನುಭವ’’ ಎಂದು ಅವರು ಹೇಳಿದ್ದಾರೆ.
ಜುಲೈ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರೀಯ ಸಮಾವೇಶಕ್ಕಾಗಿ ತನ್ನ ನಿಯೋಗಿಗಳನ್ನು ಆರಿಸುವುದಕ್ಕಾಗಿ ರಿಪಬ್ಲಿಕನ್ ಪಕ್ಷ ಏರ್ಪಡಿಸಿದ್ದ ಮೇನ್ ರಿಪಬ್ಲಿಕನ್ ಕನ್ವೆನ್ಶನ್‌ನಲ್ಲಿ ಮಾತನಾಡಿದ ಪೌಲ್, ಸ್ಥಳೀಯ ರೆಸ್ಟೋರೆಂಟ್‌ಗಳಲ್ಲಿ ವಿದೇಶಿ ಕೆಲಸಗಾರರನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು.
ಭಾರತೀಯ ಕೆಲಸಗಾರರ ಮಾತುಗಳನ್ನು ಅರ್ಥಮಾಡಿಕೊಳ್ಳುವುದು ‘‘ಅತ್ಯಂತ ಕಷ್ಟ’’ ಹಾಗೂ ಅವರೊಂದಿಗೆ ವ್ಯವಹರಿಸುವುದು ‘‘ಅತ್ಯಂತ ಕೆಟ್ಟ ಅನುಭವ’’ ಎಂದು ಅವರು ಅಭಿಪ್ರಾಯಪಟ್ಟರು. ಓರ್ವ ಭಾರತೀಯನೊಂದಿಗೆ ಮಾತನಾಡಲು ‘ದುಭಾಷಿ’ಯೊಬ್ಬನ ಅಗತ್ಯವಿದೆ ಎಂದು ಅವರು ಹೇಳಿದರು. ಆದಾಗ್ಯೂ, ಭಾರತೀಯರು ‘‘ಪ್ರೀತಿಪಾತ್ರ’’ ಜನರು ಎಂದು ತಕ್ಷಣ ಹೇಳುವುದನ್ನು ಮಾತ್ರ ಅವರು ಮರೆಯಲಿಲ್ಲ!
ಮೊನ್ನೆ ಡೊನಾಲ್ಡ್ ಟ್ರಂಪ್ ಕೂಡ ಹೀಗೆಯೇ ಹೇಳಿದ್ದರು. ಅಮೆರಿಕದ ಬ್ಯಾಂಕೊಂದರ ಭಾರತದಲ್ಲಿರುವ ಕಸ್ಟಮರ್ ಕೇರ್‌ನ ಸಿಬ್ಬಂದಿಯೋರ್ವರೊಂದಿಗೆ ತಾನು ನಡೆಸಿದ ಸಂಭಾಷಣೆಯ ‘‘ಕೆಟ್ಟ’’ ಅನುಭವವನ್ನು ಹೇಳುತ್ತಾ ಆ ಸಿಬ್ಬಂದಿಯ ಭಾರತೀಯ ಉಚ್ಚಾರಣೆಯನ್ನು ವ್ಯಂಗ್ಯವಾಗಿ ಅನುಕರಿಸಿದ್ದರು. ಆದಾಗ್ಯೂ, ಭಾರತೀಯರು ಒಳ್ಳೆಯವರು ಹಾಗೂ ಭಾರತ ಒಂದು ಶ್ರೇಷ್ಠ ದೇಶ ಎಂದು ಹೇಳುವುದನ್ನು ಮರೆಯಲಿಲ್ಲ!
ಆದಾಗ್ಯೂ, ಮೇನ್ ಕನ್ವೆನ್ಶನ್‌ನಲ್ಲಿ ಪೌಲ್ ಮತ್ತು ಟ್ರಂಪ್ ಇಬ್ಬರೂ ಹಿನ್ನಡೆ ಅನುಭವಿಸಿದ್ದಾರೆ. ಈ ಸಮಾವೇಶವು ಆರಿಸಿದ 23 ನಿಯೋಗಿಗಳ ಪೈಕಿ 19 ಮಂದಿ ರಿಪಬ್ಲಿಕನ್ ಪಕ್ಷದ ಇನ್ನೋರ್ವ ಅಭ್ಯರ್ಥಿ ಆಕಾಂಕ್ಷಿ ಟೆಡ್ ಕ್ರೂಝ್ ಬೆಂಬಲಿಗರಾಗಿದ್ದಾರೆ.
ತನ್ನ ಭಾಷಣದಲ್ಲಿ ಪೌಲ್, ಕ್ರೂಝ್ ವಿರುದ್ಧ ಟೀಕಾ ಪ್ರವಾಹವನ್ನೇ ಹರಿಸಿದರು. ಅವರು ‘‘ನಮ್ಮ ಬೆನ್ನಿನಲ್ಲಿ ಇರಿದಿದ್ದಾರೆ’’ ಎಂದು ಆರೋಪಿಸಿದರು.