×
Ad

ಕರಾವಳಿಯಲ್ಲಿ ಸಮುದ್ರದ ನೀರಿನ ಬಳಕೆ ಸಾಧ್ಯವೇ?

Update: 2016-04-24 23:41 IST

ಮಂಗಳೂರು, ಎ.24: ಕರಾವಳಿ ಜಿಲ್ಲೆಗಳ ಒಂದು ಮಗ್ಗುಲಲ್ಲಿ ಉಪ್ಪು ನೀರಿನ ಬೃಹತ್ ಆಗರವಿದ್ದರೂ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಪ್ರತಿವರ್ಷ ಇಲ್ಲಿನ ಜನರನ್ನು ಕಾಡುತ್ತಿದೆ. ಅದರಲ್ಲೂ ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಾಗತೊಡಗಿದಂತೆ ಎಪ್ರಿಲ್ ತಿಂಗಳಲ್ಲಿ ನೀರಿನ ಬರ ಕಾಡತೊಡಗಿದೆ. ಪ್ರಪಂಚದ ಕೆಲವು ದೇಶಗಳಲ್ಲಿ ಉಪ್ಪು ನೀರನ್ನು ಸಂಸ್ಕರಿಸಿ ಕುಡಿಯುವ ನೀರನ್ನಾಗಿ ಪರಿವರ್ತಿಸುವ ತಂತ್ರಜ್ಞಾನ ಬಳಕೆಯಲ್ಲಿದೆ. ಈ ಬಗ್ಗೆ ನಮ್ಮ ಜಿಲ್ಲೆಯಲ್ಲಿಯೂ ಚಿಂತನೆ ನಡೆದಿದೆಯೇ ಎನ್ನುವ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಎನ್‌ಐಟಿಕೆಯ ನಿವೃತ್ತ ಪ್ರೊಫೆಸರ್‌ಎಸ್.ಜಿ.ಮಯ್ಯ ಮಾತನಾಡಿ, ಸಮುದ್ರದ ನೀರಿನಿಂದ ಉಪ್ಪನ್ನು ಬೇರ್ಪಡಿಸಿ ಕುಡಿಯುವ ನೀರನ್ನಾಗಿ ಪರಿವರ್ತಿಸುವ ಯೋಜನೆ ಹೆಚ್ಚು ವೆಚ್ಚದಾಯಕ. ಈ ತಂತ್ರಜ್ಞಾನದ ಆರಂಭಕ್ಕೂ ಮುನ್ನ ಈ ವೆಚ್ಚವನ್ನು ಭರಿಸಲು ಸಾಧ್ಯವೇ?. ಎಷ್ಟು ಪ್ರಮಾಣದ ನೀರನ್ನು ಈ ರೀತಿ ಸಂಸ್ಕರಿಸಿ ಕೊಡಲು ಸಾಧ್ಯ? ಇಷ್ಟೊಂದು ದುಬಾರಿ ಮೊತ್ತವನ್ನು ಭರಿಸುವವರು ಯಾರು ಮೊದಲಾದ ಪ್ರಶ್ನೆಗಳು ಎದುರಾಗುತ್ತವೆ. ಆದ್ದರಿಂದ ಕರಾವಳಿಯಲ್ಲಿ ಇದು ಅಸಾಧ್ಯ ಯೋಜನೆ ಎನ್ನುತ್ತಾರೆ.
 ಮಳೆಗಾಲದಲ್ಲಿ ಹೆಚ್ಚುವರಿ ನೀರು ಸಮುದ್ರ ಸೇರುತ್ತದೆ ಎನ್ನುವವರು ನೀರಿನ ಸಮಸ್ಯೆ ಉಂಟಾದಾಗ ವೌನವಹಿಸಿದ್ದಾರೆ. ಹೆಚ್ಚುವರಿ ನೀರು ಇಲ್ಲಿ ಹರಿಯುತ್ತಿದ್ದರೆ ಅದನ್ನು ಉಳಿಸಿ ಇಲ್ಲಿನ ಜನರಿಗೆ ಮೊದಲು ಕುಡಿಯುವ ನೀರು ಕೊಡುವ ಯೋಜನೆಯನ್ನು ಹಮ್ಮಿಕೊಳ್ಳಬೇಕಾಗಿತ್ತು ಎಂದು ಅಭಿಪ್ರಾಯಪಡುತ್ತಾರೆ.
ಕರಾವಳಿಯಲ್ಲಿ ಸಮುದ್ರದ ಅಲೆಯ ಮೂಲಕ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ಯೋಜನೆಯನ್ನು ಕೈಗೆತ್ತಿಕೊಂಡು ಬದಲಿ ಇಂಧನ, ನೀರಿನ ಸಮರ್ಪಕ ಬಳಕೆಯ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವ ತಜ್ಞ ವಿಜಯ ಕುಮಾರ ಹೆಗ್ಡೆ ಸಮುದ್ರದ ನೀರಿನಿಂದ ಕುಡಿಯುವ ನೀರನ್ನು ಪಡೆಯುವ ತಂತ್ರಜ್ಞಾನದ ಬಗ್ಗೆ ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿ, ಸಮುದ್ರದ ನೀರಿನಿಂದ ಉಪ್ಪನ್ನು ಪ್ರತ್ಯೇಕಿಸಿ ನೀರನ್ನು ಬಳಸಲು ಸಾಧ್ಯವಿದೆ. ಕರಾವಳಿಯಲ್ಲಿ ಇದು ಸಾಧ್ಯವಾಗದ ಸಂಗತಿ. ಗಲ್ಫ್ ರಾಷ್ಟ್ರಗಳಲ್ಲಿ ಇದು ಸಾಧ್ಯವಾಗಿದೆ. ಅಲ್ಲಿನ ತಂತ್ರಜ್ಞಾನ ಹಾಗೂ ಆರ್ಥಿಕ ಶಕ್ತಿಯಿಂದ ಕುಡಿಯುವ ನೀರನ್ನು ಪಡೆಯಲು ಸಾಧ್ಯವಾಗುತ್ತದೆ. ನಮ್ಮ ದೇಶದಲ್ಲಿ ಸಾಧ್ಯವೇ ಎನ್ನುವುದು ಯಕ್ಷಪ್ರಶ್ನೆ ಎನ್ನುತ್ತಾರೆ.

ಯೋಜನೆಯಿಂದ ಉತ್ಪತ್ತಿಯಾಗುವ ಉಪ್ಪನ್ನು ಹೇಗೆ ಬಳಕೆ ಮಾಡಬೇಕೆನ್ನುವುದು ಇನ್ನೊಂದು ಸಮಸ್ಯೆ. ಉಪ್ಪನ್ನು ನೇರವಾಗಿ ಸಮುದ್ರಕ್ಕೆ ಸುರಿಯುಲು ಸಾಧ್ಯವಾಗು ವುದಿಲ್ಲ. ಒಂದು ವೇಳೆ ಆ ರೀತಿ ಉಪ್ಪನ್ನು ಕರಾವಳಿಯಲ್ಲಿ ಸುರಿದರೆ ಇಲ್ಲಿನ ಮೀನುಗಾ ರಿಕೆಗೆ ಗಂಭೀರ ಸಮಸ್ಯೆಯುಂಟಾಗುತ್ತದೆ. ಗಲ್ಫ್‌ನಲ್ಲಿಯೂ ಅಲ್ಲಿನ ಘಟಕಗಳಲ್ಲಿ ಉತ್ಪನ್ನವಾಗುವ ಉಪ್ಪನ್ನು ಸಮಸ್ಯೆಯಾ ಗದಂತೆ ಸಮುದ್ರದಲ್ಲಿ ತುಂಬಾ ದೂರ ಸುರಿಯುತ್ತಾರೆ ಎನ್ನುತ್ತಾರೆ.
ಗುಜರಾತಿನಲ್ಲಿ ಕೇಂದ್ರ ಸರಕಾರದ ವತಿಯಿಂದ ನಡೆಯುತ್ತಿರುವ ಸಂಶೋಧನಾ ಕೇಂದ್ರದಲ್ಲಿ ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಕರಾವಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ ಪಕ್ಷ ಕೈಗಾರಿಕೆಗಳಿಗೆ ಅಥವಾ ಇತರ ಬಳಕೆಗೆ ಸಮುದ್ರದ ನೀರನ್ನು ಸಂಸ್ಕರಿಸಿ ಉಪ್ಪು ನೀರನ್ನು ಪ್ರತ್ಯೇಕಿಸಿ ಬಳಸುವ ಪ್ರಯತ್ನ ನಡೆಸಬಹುದು. ಹಾಗಾದರೂ ಇಲ್ಲಿನ ನೀರಿನ ಸಮಸ್ಯೆಗೆ ಒಂದು ಹಂತದಲ್ಲಿ ಪರಿಹಾರ ದೊರೆಕಬಹುದು ಎನ್ನುವುದು ಮಂಗಳೂರು ವಿಶ್ವ ವಿದ್ಯಾನಿಲಯದ ತಜ್ಞರೊಬ್ಬರ ಅಭಿಪ್ರಾಯ.


ಕರಾವಳಿಯಲ್ಲಿ ನೀರಿನ ಸಮಸ್ಯೆ ಉಂಟಾಗಲು ಮುಖ್ಯ ಕಾರಣ ಮರಗಳ ನಾಶ, ಕೃಷಿ ಪದ್ಧತಿಯ ಅವನತಿ. ಇನ್ನಾದರೂ ಮರಗಳನ್ನು ನೆಟ್ಟು ಬೆಳಸಬೇಕಾಗಿದೆ. ಜಾಗತಿಕ ತಾಪಮಾನ ಏರಿಕೆಗೆ ಇನ್ನೂ ಹಲವಾರು ಕಾರಣಗಳಿವೆ. ಇಲ್ಲಿ ಬೆಳೆಯುತ್ತಿರುವ ಕೈಗಾರಿಕೆಗಳು, ರೈತರಿಗೆ ಸರಕಾರದಿಂದ ಸಿಗಬೇಕಾದ ನೆರವು ಸಿಗದೆ ಇರುವುದು, ಪರಿಸರ ಸಮತೋಲನಕ್ಕೆ ಸಂಬಂಧಿಸಿದ ಕೆಲಸ ನಡೆಯದೆ ಇರುವುದು ಕರಾವಳಿಯಲ್ಲಿ ನೀರಿನ ಸಮಸ್ಯೆ ಉಂಟಾಗಲು ಪ್ರಮುಖ ಕಾರಣವಾಗಿದೆ. ಉಪ್ಪು ನೀರಿನಿಂದ ಕುಡಿಯುವ ನೀರನ್ನು ಪಡೆಯುವ ಕೆಲಸ ಇಲ್ಲಿ ಕಷ್ಟ ಸಾಧ್ಯ.
               -ವಿಜಯ ಕುಮಾರ ಹೆಗ್ಡೆ

  ಗಲ್ಫ್ ರಾಷ್ಟ್ರಗಳಲ್ಲಿ ಸಮುದ್ರದ ನೀರಿನಲ್ಲಿರುವ ಉಪ್ಪನ್ನು ಪ್ರತ್ಯೇಕಿಸಿ ಕುಡಿಯುವ ನೀರಿಗಾಗಿ ಬಳಸುತ್ತಾರೆ. ಅಲ್ಲಿಯ ಆದಾಯ, ಬಳಸುತ್ತಿರುವ ತಂತ್ರಜ್ಞಾನ ಹಾಗೂ ಸಂಪನ್ಮೂಲಗಳಿಂದ ಅದು ಸಾಧ್ಯವಾಗಿದೆ. ಅಲ್ಲಿನ ರಾಷ್ಟ್ರಗಳಿಗೆ ಬೇಕಾಗುವ ನೀರಿನ ಪ್ರಮಾಣವನ್ನು ಇಲ್ಲಿಗೆ ಹೋಲಿಸಿದರೆ ತುಂಬಾ ಕಡಿಮೆ. ಎಲ್ಲಾ ಕಾರಣಗಳಿಂದ ಈ ರೀತಿಯ ಯೋಜನೆ ಗಲ್ಫ್ ರಾಷ್ಟ್ರಗಳಲ್ಲಿ ಅನುಷ್ಠಾನಗೊಂಡಿದೆ. ಕರಾವಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮಾಡಲು ಹಲವು ದಾರಿಗಳಿವೆ. ಇಲ್ಲಿ ಮಳೆ ನೀರನ್ನು, ಹವಾಮಾನವನ್ನು ಸರಿಯಾಗಿ ಅಧ್ಯಯನ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರೆ ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಸ್ವಾತಂತ್ರ ನಂತರ ಇಷ್ಟು ವರ್ಷಗಳಾದರೂ ರಾಜ್ಯದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಸಮರ್ಪಕವಾದ ವೈಜ್ಞಾನಿಕ ಅಧ್ಯಯನ ನಡೆದಂತೆ ಕಂಡು ಬಂದಿಲ್ಲ. ಇದರಿಂದಾಗಿ ಪ್ರತಿವರ್ಷ ಜನವರಿಯಿಂದ ಮೇ ತಿಂಗಳವರೆಗೆ ಕುಡಿಯುವ ನೀರಿಗಾಗಿ ಜನರು ತೊಂದರೆ ಅನುಭವಿಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
                              -ಎಸ್.ಜಿ.ಮಯ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News