×
Ad

ರಂಗಭೂಮಿ ಎಲ್ಲ ಕಾಲಕ್ಕೂ ಜೀವಂತ ಮಾಧ್ಯಮ: ಅಂಬಾತನಯ ಮುದ್ರಾಡಿ

Update: 2016-04-24 23:41 IST

ಉಡುಪಿ, ಎ.24: ಎಲ್ಲ ಕಾಲಕ್ಕೂ ಜೀವಂತ ಇರುವ ಮಾಧ್ಯಮ ನಾಟಕ ರಂಗಭೂಮಿಯಾಗಿದೆ. ನಾಟಕವು ಕವಿತೆ ಗಿಂತ ಶ್ರೇಷ್ಠವಾದ ಮಾಧ್ಯಮ ಎಂದು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದ್ದಾರೆ.

ಉಡುಪಿ ರಂಗಭೂಮಿ ವತಿಯಿಂದ ದಿ.ಕುತ್ಪಾಡಿ ಆನಂದ ಗಾಣಿಗರ ಸಂಸ್ಮರಣೆಯಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರವಿವಾರ ನಡೆದ ಆನಂದೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಇಡೀ ಜಗತ್ತಿನಲ್ಲಿ ಗ್ರೀಕ್, ಇಂಗ್ಲೆಂಡ್ ಹಾಗೂ ಭಾರತೀಯ ರಂಗಭೂಮಿ ಪ್ರಮುಖವಾದುದು. ಇದರಲ್ಲಿ ಗ್ರೀಕ್ ಮತ್ತು ಇಂಗ್ಲೆಂಡ್ ತಮ್ಮ ಪರಂಪರೆಯ ಶಕ್ತಿಯನ್ನು ಉಳಿಸಿಕೊಂಡು ಬಂದಿದೆ. ಆದರೆ ಭಾರತೀಯ ರಂಗಭೂಮಿಯು ಬೇರೆ ರಂಗಭೂಮಿಯನ್ನು ಎರವಲು ಪಡೆದುಕೊಂಡು ಸ್ವಂತಿಕೆಯನ್ನು ಕಳೆದುಕೊಂಡಿದೆ. ಕಾಳಿದಾಸ ಹಾಗೂ ಷೇಕ್ಸ್‌ಪಿಯರ್ ಹೋಲಿಕೆ ಸರಿಯಲ್ಲ. ಇವರಿಬ್ಬರ ಕಾಲಮಾನಗಳು ಬೇರೆಬೇರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ನಮ್ಮ ಬದುಕು ಇಂದು ಪ್ರಯೋಗ ಹಾಗೂ ಪ್ರದರ್ಶನಶೀಲವಾಗುತ್ತಿದೆ. ಬದುಕು ಮಿನಿಯಾಗಿ ದೀರ್ಘ ವಾದ ಚಿಂತನೆ, ಯೋಚನೆ, ಬರಹಗಳು ಇಂದು ಮರೆಯಾಗುತ್ತಿದೆ. ನಾಟಕವು ನೋಡುವವರಿಗೆ ದರ್ಶನ ನೀಡಬೇಕು. ಅದು ಕಲಾವಿದರ ಕೈಯಲ್ಲಿದೆ ಎಂಬುದನ್ನು ಅರಿತುಕೊಳ್ಳಬೇಕು. ನಾಟಕಗಳು ನಟ, ನಿರ್ದೇಶಕ ಕೇಂದ್ರೀಕೃತವಾಗಬಾರದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ನೂತನ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಉಡುಪಿ ಮತ್ತು ದ.ಕ. ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮಹಾಪ್ರಬಂಧಕ ಕೆ.ಜೆ.ಗಾಣಿಗ ಮಾತನಾಡಿದರು.

ಸುವರ್ಣ ರಂಗಭೂಮಿ ಸಮಿತಿಯ ಕಾರ್ಯಾಧ್ಯಕ್ಷ ಡಾ.ಅರವಿಂದ ನಾಯಕ್ ಅಮ್ಮುಂಜೆ, ರಂಗಭೂಮಿ ಪ್ರಧಾನ ಕಾರ್ಯದರ್ಶಿ ಕುತ್ಪಾಡಿ ಪ್ರದೀಪ್‌ಚಂದ್ರ ಗಾಣಿಗ, ಉಪಾಧ್ಯಕ್ಷ ವಾಸುದೇವ ರಾವ್ ಉಪಸ್ಥಿತರಿದ್ದರು. ವಿವೇಕಾನಂದ ಸ್ವಾಗತಿಸಿದರು. ನಂದಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಂತರ ದಾಕ್ಷಾಯಿನಿ ಭಟ್ ನಿರ್ದೇಶನದಲ್ಲಿ ಬೆಂಗಳೂರಿನ ದೃಶ್ಯ ರಂಗತಂಡದಿಂದ ‘ರಕ್ತವರ್ಣೆ’ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News