ಪಾಕ್ ಸಿಖ್ ರಾಜಕಾರಣಿಯ ಕೊಲೆ : ಹಿಂದೂ ರಾಜಕಾರಣಿಯ ಬಂಧನ
ಪೇಶಾವರ, ಎ. 25: ವಾಯವ್ಯ ಪಾಕಿಸ್ತಾನದಲ್ಲಿ ಪ್ರಮುಖ ಸಿಕ್ಖ್ ರಾಜಕಾರಣಿಯೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖಂಡ ಹಾಗೂ ಜಿಲ್ಲಾಮಟ್ಟದ ಹಿಂದೂ ಧುರೀಣರೊಬ್ಬರನ್ನು ಬಂಧಿಸಲಾಗಿದೆ. ತಾನೇ ಈ ಹತ್ಯೆ ಮಾಡಿರುವುದಾಗಿ ಪಾಕಿಸ್ತಾನಿ ತಾಲಿಬಾನ್ ಹೇಳಿಕೊಂಡ ಮರುದಿನವೇ ಪ್ರಕರಣ ಮತ್ತೊಂದು ಮಹತ್ವದ ತಿರುವು ಪಡೆದಿದೆ.
ಸ್ವಾತ್ ಜಿಲ್ಲೆಯ ಪಾಲಿಕೆ ಸದಸ್ಯ ಹಾಗೂ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಅಲ್ಪಸಂಖ್ಯಾತ ಮುಖಂಡ ಬಲದೇವ್ ಕುಮಾರ್ ಅವರು ಡಾಕ್ಟರ್ ಸರ್ದಾರ್ ಸೂರನ್ ಸಿಂಗ್ ಹತ್ಯೆಯಲ್ಲಿ ಷಾಮೀಲಾಗಿದ್ದಾರೆ ಎಂಬ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ.
52 ವರ್ಷ ವಯಸ್ಸಿನ ಸಿಂಗ್ ಖೈಬರ್ ಅವರು ಅಲ್ಪಸಂಖ್ಯಾತ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪತುಂಕ್ವಾ ಮುಖ್ಯಮಂತ್ರಿಗಳ ವಿಶೇಷ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರ ಈ ಹತ್ಯೆ ನಡೆದಿದ್ದು, ಪಾಕಿಸ್ತಾನಿ ತಾಲಿಬಾನ್ ಶನಿವಾರ ಈ ಹತ್ಯೆಯನ್ನು ತಾನೇ ಮಾಡಿದ್ದಾಗಿ ಹೇಳಿಕೊಂಡಿತ್ತು. ಆದರೆ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಈ ಸಂಬಂಧ ಹೇಳಿಕೆ ನೀಡಿ ವಿಶೇಷ ಕಾರ್ಯಾಚರಣೆ ಪಡೆಯ ಶಾರ್ಪ್ ಶೂಟರ್‌ಗಳು ಯಶಸ್ವಿಯಾಗಿ ಸರ್ದಾರ್ ಸರೂನ್ ಸಿಂಗ್ ಅವರನ್ನು ತವರು ಜಿಲ್ಲೆ ಬುನೇರ್‌ನಲ್ಲಿ ಹತ್ಯೆ ಮಾಡಿದ್ದಾಗಿ ಸ್ಪಷ್ಟಪಡಿಸಿದೆ.
ಮಲಖಂಡ್ ವಿಭಾಗದ ಉಪ ಐಜಿ ಅಝಾದ್ ಖಾನ್ ಅವರು ಕುಮಾರ್ ಬಂಧನವನ್ನು ಖಚಿತಪಡಿಸಿದ್ದಾರೆ. ಬಂಧನದ ಬಳಿಕ ಕುಮಾರ್‌ನನ್ನು ಅಜ್ಞಾತ ಸ್ಥಳಕ್ಕೆ ವಿಚಾರಣೆಗೆ ಕರೆದೊಯ್ಯಲಾಗಿದೆ.
ಸಿಂಗ್ ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಘಟನೆ ಬಗ್ಗೆ ವಿಚಾರಣೆಗೆ ತನಿಖಾ ಆಯೋಗ ನೇಮಕ ಮಾಡಲಾಗಿದೆ. ಸಿಂಗ್ ಅವರು ಮೂಲತಃ ವೈದ್ಯರಾಗಿದ್ದು, ಟಿವಿ ನಿರೂಪಕರಾಗಿ, ರಾಜಕಾರಣಿಯಾಗಿ ಜನಪ್ರಿಯರಾಗಿದ್ದರು. ಪಾಕಿಸ್ತಾನಿ ಜಮಾತ್ ಇ ಇಸ್ಲಾಮಿ ಸದಸ್ಯರಾಗಿಯೂ ಒಂಬತ್ತು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದರು.