ಸರಳ ಬದುಕಿನ ಮೂಲಕ ಮಾದರಿ ವ್ಯಕ್ತಿತ್ವದ ಪ್ರತೀಕ-ಕೊಂಡೆವೂರು ಶ್ರೀ
ಮಂಜೇಶ್ವರ ; ತಮ್ಮ ಅನುಕೂಲತೆಗಳನ್ನು ದೇವರ ಪ್ರಸಾದವೆಂದು ಭಾವಿಸಿ ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮನಸ್ಸು ಇತರರಿಗೆ ಮಾದರಿಯಾದುದು.ವೃಕ್ಷದಂತೆ ಫಲಾಪೇಕ್ಷೆಯಿಲ್ಲದೆ ನೆರವಾಗುವ ಸಾಯಿರಾಂ ಗೋಪಾಲಕೃಷ್ಣ ಭಟ್ಟರ ಸೇವಾ ಚಟುವಟಿಕೆ ಕರಾವಳಿ ಪ್ರದೇಶದಲ್ಲಿ ಅತ್ಯಪೂರ್ವವಾಗಿದ್ದು,ಭಗವದನುಗ್ರಹದ ಪೂರ್ಣ ರಕ್ಷೆ ಇಂತಹ ಸೇವೆಗಳಿಗೆ ಲಭಿಸುವುದೆಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಕೊಡಮಾಡಿದ 235ನೇ ಉಚಿತ ಮನೆಯ ಕೀಲಿಕೈಯನ್ನು ಭಾನುವಾರ ಸುಂದರ ಕುಮಾರಮಂಗಲರವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಸಂಪತ್ತು ಸೌಭಾಗ್ಯಗಳು ಸಾಕಷ್ಟು ಜನರಿಗಿದ್ದರೂ ಅದನ್ನು ಸ್ವಾರ್ಥ ಲಾಲಸೆ ಬಿಟ್ಟು ಪರೋಪಾರಕ್ಕಾಗಿ ಒಂದಂಶವನ್ನಾದರೂ ನೀಡದಿರುವುದು ಮಾನವ ಜನ್ಮಕ್ಕೆ ಮಾಡುವ ಮೋಸವಾಗಿದ್ದು,ಪ್ರಸ್ತುತ ಸಂದರ್ಭದಲ್ಲಿ ಮಾನವೀಯತೆಗೆ ಬೆಲೆ ಕುಂಠಿತಗೊಳ್ಳುತ್ತಿರುವುದು ವಿಶಾದನೀಯ.ಆದರೆ ಸೀಮಿತ ಸರಳ ಬದುಕಿನ ಮೂಲಕ ಮಾದರಿ ಜೀವನ ನಡೆಸುತ್ತಿರುವ ಸಾಯಿರಾಂ ಗೋಪಾಲಕೃಷ್ಣ ಭಟ್ಟರು ಗಳಿಕೆಯ ಬಹು ಅಂಶವನ್ನೂ ಸಮಾಜ ಸೇವೆಗೆ,ದೀನರ ಶ್ರೇಯಸ್ಸಿಗೆ ಬಳಸುತ್ತಿರುವುದು ನಾಡಿನ ಪುಣ್ಯವೆಂದು ಅವರು ತಿಳಿಸಿದರು.ಭಟ್ಟರಿಗೆ ಇನ್ನಷ್ಟು ಸೇವಾ ಶಕ್ತಿ ಭಗವಂತ ಅನುಗ್ರಹಿಸಲೆಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಮಾತನಾಡಿ,ಹಿರಿಯರೂ ಮಾರ್ಗದರ್ಶಕರಾದ ಸಾಯಿರಾಂ ಗೋಪಾಲಕೃಷ್ಣರ ಜೀವನ ಯುವ ಸಮೂಹಕ್ಕೆ ಮಾದರಿಯಾಗಿದ್ದು,ಎಲ್ಲಾ ವರ್ಗದ ಸರ್ವ ಕಾಲಕ್ಕೂ ಮಾರ್ಗದರ್ಶಿ ವ್ಯಕ್ತಿತ್ವ ರೂಪಣೆಯ ಪ್ರತಿಮೆಯೆಂದು ತಿಳಿಸಿದರು.
ಶಾರದಾ .ಭಟ್, ಶಾಂತಿ ಸಂದೇಶ್ ವಾರಣಾಸಿ,ಮಧುರಾ ಭಟ್ ಕಿಳಿಂಗಾರ್,ಶೀಲಾ ಕೆ.ಎನ್ ಭಟ್,ಸಂದೇಶ್ ವಾರಣಾಸಿ ಮೊದಲಾದವರು ಉಪಸ್ಥಿತರಿದ್ದರು.ಕೆ.ಎನ್ ಕೃಷ್ಣ ಭಟ್ ಸ್ವಾಗತಿಸಿ,ಎಂ.ಎಚ್.ಜನಾರ್ಧನ್ ವಂದಿಸಿದರು.