ನೆಕ್ಕಿಲಾಡಿ: ಬೀಗ ಹಾಕಿದ್ದ ಮನೆಗೆ ಕನ್ನ
ಉಪ್ಪಿನಂಗಡಿ: 2 ದಿನಗಳ ಹಿಂದೆ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಕಳ್ಳರು ಮನೆಗೆ ಕನ್ನ ಹಾಕಿರುವ ಬಗ್ಗೆ 34-ನೆಕ್ಕಿಲಾಡಿಯಿಂದ ವರದಿಯಾಗಿದೆ. ನೆಕ್ಕಿಲಾಡಿ ನಿವಾಸಿ ಲಕ್ಷ್ಮೀಶ ಎಂಬವರ ಮನೆಗೆ ಕಳ್ಳರು ನುಗ್ಗಿದ್ದು, 3 ಕಪಾಟು ಮುರಿದು ಚಿನ್ನಾಭರಣ ದೋಚಿದ್ದಾರೆ. ಆದರೆ ಕಳವು ಆಗಿರುವ ಸೊತ್ತುಗಳ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಲಕ್ಷ್ಮೀಶ ಮನೆಯವರು 2 ದಿನಗಳ ಹಿಂದೆ ಮಂಗಳೂರುನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದು, ಎ. 24ರಂದು ರಾತ್ರಿ ಮನೆಯ ಬೀಗ ತೆಗೆದು ಒಳ ಹೊಕ್ಕಾಗ ಮನೆಯೊಳಗೆ ಕಪಾಟು ತೆರೆದುಕೊಂಡಿದ್ದು, ಕಳ್ಳತನವಾಗಿರುವುದು ಬೆಳಕಿಗೆ ಬಂತೆನ್ನಲಾಗಿದೆ.
ಶ್ವಾನದಳ ಆಗಮನ: ಘಟನಾ ಸ್ಥಳಕ್ಕೆ ಪ್ರೊಬೇಷನರಿ ಎ.ಎಸ್.ಪಿ. ಲಕ್ಷ್ಮಣ ನಿಂಬರ್ಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿದ್ದು, ಅವರು ಮಂಗಳೂರಿನಿಂದ ಬಂದ ಬಳಿಕ ಕಳವು ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಮನೆಯಿಂದ ಯತ್ನ ವಿಫಲ: 34-ನೆಕ್ಕಿಲಾಡಿ ನಿವಾಸಿ ಸತ್ತಾರ್ ಎಂಬವರ ಮನೆಗೂ ಕಳ್ಳರು ಕನ್ನ ಹಾಕಿದ್ದು, ಇವರ ಮನೆಯಲ್ಲಿ ಕಳ್ಳತನ ಯತ್ನ ವಿಫಲವಾಗಿದೆ ಎಂದು ಹೇಳಲಾಗಿದೆ.
ಸತ್ತಾರ್‌ರವರು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು, ಇವರ ಮನೆಯವರು 20 ದಿನಗಳ ಹಿಂದೆ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿದ್ದರು. ಇವರು 3 ದಿನಗಳ ಹಿಂದೆ ಮನೆಗೆ ಬಂದಿದ್ದು, ಮನೆ ಬೀಗ ತೆಗೆದು ಒಳ ಹೊಕ್ಕಾಗ ಮನೆಯೊಳಗಿನ ಕಪಾಟುಗಳು ತೆರೆದುಕೊಂಡಿತ್ತೆನ್ನಲಾಗಿದೆ. ಆದರೆ ಇದರಲ್ಲಿ ಚಿನ್ನಾಭರಣ ಯಾ ಹಣ ಇರಲಿಲ್ಲ ಎಂದು ಹೇಳಲಾಗಿದೆ.