ಉಪ್ಪಿನಂಗಡಿ:ವಿದ್ಯುತ್ ಕೊರತೆ ನೀಗಿಸುವ ಕೆಲಸ ಸಹಕಾರಿ ಸಂಘಗಳಿಂದಾಗಬೇಕು - ಬಿ.ಕೆ. ಸಲೀಂ
ಉಪ್ಪಿನಂಗಡಿ: ಹಣಕಾಸು ಸಂಸ್ಥೆಗಳು ಸೌರಶಕ್ತಿ ಬಳಸುವ ಮೂಲಕ ಗ್ರಾಮದ ಜನರಿಗೆ ಪ್ರೇರಣೆ ನೀಡುವ ಕೆಲಸ ಮಾಡಬೇಕು. ಅಲ್ಲದೇ, ಸೌರಶಕ್ತಿ ಅಳವಡಿಕೆಗೆ ಸದಸ್ಯರಿಗೆ ಸಾಲ- ಸೌಲಭ್ಯ ನೀಡುವ, ಸೌರಶಕ್ತಿ ಬಗ್ಗೆ ಕೃಷಿಕರಿಗೆ ಬೇಕಾದ ಮಾಹಿತಿ ನೀಡುವ ಪ್ರಯತ್ನವೂ ನಡೆಸುವ ಮೂಲಕ ವಿದ್ಯುತ್ ಕೊರತೆ ನೀಗಿಸುವ ಕೆಲಸ ಸಹಕಾರಿ ಸಂಘಗಳಿಂದಾಗಬೇಕು ಎಂದು ಸಹಕಾರಿ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕ ಬಿ.ಕೆ. ಸಲೀಂ ತಿಳಿಸಿದರು.
ಅರ್ಬ್ ಎನರ್ಜಿ ಸಂಸ್ಥೆಯವರು ಬಂಟ್ವಾಳ ತಾಲೂಕಿನ ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡದ ಮೇಲ್ಚಾವಣಿಯಲ್ಲಿ ನಿರ್ಮಿಸಿರುವ ಸೌರಶಕ್ತಿ ಘಟಕವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಹಕಾರಿ ಸಂಘವೊಂದು ಸ್ವಂತ ಉಪಯೋಗಕ್ಕೆ ಹಾಗೂ ಉಳಿದ ವಿದ್ಯುತ್ತನ್ನು ಮಾರಾಟ ಮಾಡುವ ಉದ್ದೇಶದಿಂದ ಸೌರಶಕ್ತಿ ಘಟಕವನ್ನು ಸ್ಥಾಪಿಸಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಇದು ಪ್ರಥಮ. ಪೆರ್ನೆಯಂತಹ ಗ್ರಾಮೀಣ ಪ್ರದೇಶದಲ್ಲಿ ಇಂತಹ ಘಟಕವನ್ನು ಸ್ಥಾಪಿಸುವ ಮೂಲಕ ಪೆರ್ನೆ ಸಿಎ ಬ್ಯಾಂಕ್ ಎಲ್ಲಾ ಸಹಕಾರಿ ಸಂಘಗಳಿಗೆ ಮಾದರಿಯಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ ಅವರು, ನೈಸರ್ಗಿಕ ಶಕ್ತಿ ಬಳಸುವುದಲ್ಲಿ ಭಾರತವು ಹಿಂದಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಇನ್ನಷ್ಟು ಮುಂದುವರಿಯುವುದು ಪ್ರತಿಯೋರ್ವರ ಕರ್ತವ್ಯವಾಗಿದೆ ಎಂದು ಬಿ.ಕೆ. ಸಲೀಂ ತಿಳಿಸಿದರು.
ಮೆಸ್ಕಾಂನ ಬಂಟ್ವಾಳ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ವಿ. ಉಮೇಶ್ಚಂದ್ರ ಮಾತನಾಡಿ, ವಿದ್ಯುತ್ ಕ್ಷೇತ್ರವಿಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ವಿದ್ಯುತ್ ಇಂದು ಬದುಕಿಗೆ ಮೂಲಾಧಾರವಾಗಿದ್ದು, ವಿದ್ಯುತ್ ಅನ್ನು ಉಳಿಸುವ ಕೆಲಸ ಎಲ್ಲರಿಂದಾಗಬೇಕಿದೆ. ಮುಗಿದು ಹೋಗುವ ನೀರು, ಅಣು ಶಕ್ತಿ, ಕಲ್ಲಿದ್ದಲಿಗೆ ಪರ್ಯಾಯವಾಗಿ ಸೌರಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉಪಯೋಗಿಸುವ ಮೂಲಕ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಬೇಕಿದೆ ಎಂದರು.
ಅರ್ಬ್ ಎನರ್ಜಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಟಿ. ಸುಧೀಂದ್ರ ಮಾತನಾಡಿ, ಅರ್ಬ್ ಎನರ್ಜಿ ಸಂಸ್ಥೆಯು ಇದನ್ನು ನಿರ್ಮಿಸಿದ್ದು, ಇದು ಈ ಸಂಸ್ಥೆಯ 59ನೆ ಸೌರಶಕ್ತಿ ಮೇಲ್ಚಾವಣಿ ಘಟಕವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 180030101650ವನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ತೋಯಾಜಾಕ್ಷ ಶೆಟ್ಟಿ ಮಾತನಾಡಿ, ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘವು 8.77 ಲಕ್ಷ ರೂಪಾಯಿ ವೆಚ್ಚದಲ್ಲಿ ಸಂಘದ ಕಟ್ಟಡದ ಮೇಲ್ಛಾವಣಿಯಲ್ಲಿ ಸೌರಶಕ್ತಿ ಘಟಕವನ್ನು ಸ್ಥಾಪಿಸಿದ್ದು, ಇದು 10 ಕಿ.ವ್ಯಾ. ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ ಹೊಂದಿದೆ. ಸಂಘವು ಬಳಸಿ ಹೆಚ್ಚುವರಿಯಾದ ವಿದ್ಯುತನ್ನು ಮೆಸ್ಕಾಂಗೆ ಮಾರಾಟ ಮಾಡುತ್ತಿದೆ ಎಂದು ಮಾಹಿತಿ ನೀಡಿದರು. ವೇದಿಕೆಯಲ್ಲಿ ವಿಟ್ಲ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ್ ಜೋಷಿ, ಪೆರ್ನೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ನಾಯ್ಕ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಯೊಗೀಶ್, ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಅಬ್ದುಲ್ ಶಾಫಿ, ಸಹಕಾರಿ ಸಂಘದ ನಿವೃತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು.
ಪೆರ್ನೆ ಸಿಎ ಬ್ಯಾಂಕ್ ನಿರ್ದೇಶಕ ಉಮಾನಾಥ ಶೆಟ್ಟಿ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪುಷ್ಪಾ ವಂದಿಸಿದರು. ನಿರ್ದೇಶಕ ಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.