×
Ad

ಸೌದಿ ಅರೇಬಿಯ ಅಗ್ನಿದುರಂತ:ದ.ಕ ಜಿಲ್ಲೆಯ ಇಬ್ಬರ ಪಾರ್ಥಿವ ಶರೀರ ಮಂಗಳೂರಿಗೆ

Update: 2016-04-25 17:40 IST

ಮಂಗಳೂರು, ಎ.25; ಸೌದಿ ಅರೇಬಿಯಾದ ಜುಬೈಲ್ ಯುನೈಟೆಡ್ ಪ್ಲಾಂಟ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ ದಕ್ಷಿಣ ಕನ್ನಡದ ಇಬ್ಬರ ಪಾರ್ಥಿವ ಶರೀರ ಇಂದು ಬಜ್ಪೆ ಅಂತರಾಷ್ಟೀಯ ವಿಮಾನ ನಿಲ್ದಾಣದ ಮೂಲಕ ಹುಟ್ಟೂರಿಗೆ ಆಗಮಿಸಿತು.

    ಅಗ್ನಿ ದುರಂತದಲ್ಲಿ ದಕ್ಷಿಣ ಕನ್ನಡದ ಐವರು ಸಾವನ್ನಪ್ಪಿದ್ದು ಇದರಲ್ಲಿ ಹಳೆಯಂಗಡಿಯ ಅಶ್ರಫ್ ಮತ್ತು ಮುಲ್ಕಿ ಕೊಳ್ನಾಡುವಿನ ಕಾರ್ತಿಕ್ ಸನಿಲ್ ಅವರ ಪಾರ್ಥಿವ ಶರೀರ ಇಂದು ಹುಟ್ಟೂರಿಗೆ ತರಲಾಯಿತು.

  ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಮುಂಬೈ ನಿಂದ ಮಂಗಳೂರಿಗೆ ಬಂದ ಜೆಟ್ ಏರ್‌ವೇಸ್ ನಲ್ಲಿ ಪಾರ್ಥಿವ ಶರೀರವನ್ನು ತರಲಾಗಿತ್ತು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಡೊಮೆಸ್ಟಿಕ್ ಕಾರ್ಗೋ ವಿಭಾಗಕ್ಕೆ ಬಂದ ಪಾರ್ಥಿವ ಶರೀರವನ್ನು ಕುಟುಂಬಿಕರು ಸ್ವೀಕರಿಸಿ ಹುಟ್ಟೂರಿಗೆ ಕೊಂಡೊಯ್ದರು.

  ಹಳೆಯಂಗಡಿ ಅಶ್ರಫ್ ಅವರ ಪಾರ್ಥಿವ ಶರೀರವನ್ನು ಅವರ ಸಹೋದರರಾದ ಮುಹಮ್ಮದ್ ಶರೀಫ್, ನಿಜಾಮ್ ಸ್ವೀಕರಿಸಿದರು. ಕಾರ್ತಿಕ್ ಸನಿಲ್ ಅವರ ಪಾರ್ಥಿವ ಶರೀರವನ್ನು ಅವರ ತಂದೆ ಕೆ.ಎ ಸನಿಲ್ ಸ್ವೀಕರಿಸಿದರು.

  ಸೌದಿ ಅರೇಬಿಯದಿಂದ ಆದಿತ್ಯವಾರ ರಾತ್ರಿ ಹೊರಟ ಜೆಟ್ ಏರ್ವೆಸ್ ವಿಮಾನದಲ್ಲಿ ಅಶ್ರಫ್ ಅವರ ಮೃತದೇಹವನ್ನು ಅವರ ಸಹೋದರ ಮುಹಮ್ಮದ್ ಶರೀಫ್ ತಂದಿದ್ದರೆ ಕಾರ್ತಿಕ್ ಅವರ ಪಾರ್ಥಿವ ಶರೀರವನ್ನು ಜುಬೈಲ್ ಯುನೈಟೆಡ್ ಪ್ಲಾಂಟ್ ಕಂಪೆನಿಯ ಪ್ರತಿನಿಧಿ ತೌಫಿಕ್ ವಿಮಾನದಲ್ಲಿ ತಂದಿದ್ದರು.

  ವಿಮಾನ ನಿಲ್ದಾಣದಲ್ಲಿ ಅಶ್ರಫ್ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯುವ ಸಂದರ್ಭದಲ್ಲಿ ಅವರ ಸಹೋದರರು, ಆಪ್ತರು,ಪಿಎಫ್‌ಐ ಕಾರ್ಯಕರ್ತರು ಜೊತೆಗಿದ್ದರು.

 ಕಾರ್ತಿಕ್ ಸನಿಲ್ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯುವ ಸಂದರ್ಭದಲ್ಲಿ ಅವರ ತಂದೆ ಮತ್ತು ಕುಟುಂಬ ಸದಸ್ಯರು ಜೊತೆಗಿದ್ದರು.

 ಅಶ್ರಫ್ ಅವರ ಪಾರ್ಥಿವ ಶರೀರವನ್ನು ಹಳೆಯಂಗಡಿಯಲ್ಲಿರುವ ನಿವಾಸಕ್ಕೆ ಕೊಂಡು ಹೋಗಿ ಅಲ್ಲಿಂದ ಹಳೆಯಂಗಡಿ ಕದಿಕೆಯ ಜುಮಾ ಮಸೀದಿಯಲ್ಲಿ ಧಪನ ಮಾಡಲಾಯಿತು.

 ಕಾರ್ತಿಕ್ ಸನಿಲ್ ಅವರ ಪಾರ್ಥಿವ ಶರೀರವನ್ನು ಕೊಳ್ನಾಡುವಿನ ಮನೆಗೆ ಕೊಂಡು ಹೋಗಿ ಅಲ್ಲಿಂದ ಕೊಳ್ನಾಡು ಕೆ.ಎಸ್.ರಾವ್ ನಗರದ ರುದ್ರಭೂಮಿಯಲ್ಲಿ ಅಂತ್ಯ ಕ್ರೀಯೆ ನಡೆಸಲಾಯಿತು.ಈ ಸಂದರ್ಭದಲ್ಲಿ ತಹಶೀಲ್ದಾರ್, ಗ್ರಾಮಾಧಿಕಾರಿ ಉಪಸ್ಥಿತರಿದ್ದರು.

ಪಾರ್ಥಿವ ಶರೀರದೊಂದಿಗೆ ಬಂದವರು ಮಂಗಳೂರಿನಲ್ಲಿ- ಪಾರ್ಥಿವ ಶರೀರ ಮುಂಬೈಯಲ್ಲಿ:

      ಸೌದಿ ಅರೇಬಿಯದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ್ದವರ ಪೈಕಿ ಆರು ಮಂದಿಯ ಮೃತದೇಹವನ್ನು ಆದಿತ್ಯವಾರದಂದು ರಾತ್ರಿ ಸೌದಿ ಅರೇಬಿಯದಿಂದ ಮುಂಬೈಗೆ ಕಳುಹಿಸಲಾಗಿತ್ತು. ಇದರಲ್ಲಿ ಎರಡು ಮಹಾರಾಷ್ಟ್ರಕ್ಕೆ ಸೇರಿದವರಾಗಿದ್ದು ಎರಡು ಕೇರಳ ರಾಜ್ಯಕ್ಕೆ ಸೇರಿದವರಾಗಿತ್ತು. ಎರಡು ದಕ್ಷಿಣ ಕನ್ನಡ ಜಿಲ್ಲೆಯ ಮೃತರದ್ದಾಗಿತ್ತು. ಇಂದು ಮುಂಜಾನೆ ಮುಂಬೈಯಿಂದ ಮಂಗಳೂರಿಗೆ ಬರಬೇಕಿದ್ದ ವಿಮಾನದಲ್ಲಿ ಪಾರ್ಥಿವ ಶರೀರ ಬರಬೇಕಿತ್ತು. ಸೌದಿ ಅರೇಬಿಯದಿಂದ ಎರಡು ಪಾರ್ಥಿವ ಶರೀರದೊಂದಿಗೆ ಒರ್ವ ಸಹೋದರ ಮತ್ತು ಮತ್ತೊರ್ವ ಕಂಪೆನಿ ಪ್ರತಿನಿಧಿ ಬಂದಿದ್ದರು. ಅವರು ಬೆಳಿಗ್ಗೆ ಮುಂಬೈಗೆ ಬಂದು ಮತ್ತೆ ಮುಂಬೈನಿಂದ ಮಂಗಳುರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಆದರೆ ಅವರು ಬಂದ ವಿಮಾನದಲ್ಲಿ ಜೆಟ್ ಏರ್ ವೇಸ್ ಪಾರ್ಥಿವ ಶರೀರವನ್ನು ಹಾಕದೆ ನಿರ್ಲಕ್ಷ ವಹಿಸಿದ್ದು ಕುಟುಂಬಿಕರಿಗೆ ಸಾಕಷ್ಟು ಸಮಸ್ಯೆ ಉಂಟು ಮಾಡಿತು. ಮಂಗಳೂರಿನಲ್ಲಿ ವಿಮಾನ ನಿಲ್ದಾಣದಲ್ಲಿ ಪಾರ್ಥಿವ ಶರೀರ ಸ್ವೀಕರಿಸಲು ಬಂದ ಕುಟುಂಬಿಕರಿಗೆ ಪಾರ್ಥಿವ ಶರೀರ ಮುಂಬೈ ವಿಮಾನ ನಿಲ್ದಾಣದಲ್ಲಿಯೆ ಬಾಕಿಯಾಗಿರುವುದು ಗೊತ್ತಾಗಿದೆ. ಜೆಟ್ ಏರ್‌ವೇಸ್ ನಿರ್ಲಕ್ಷಕ್ಕೆ ಬೆಳಿಗ್ಗೆ ಬರಬೇಕಿದ್ದ ಪಾರ್ಥಿವ ಶರೀರಗಳು ಅಲ್ಲಿಯೆ ಬಾಕಿಯಾಗಿದ್ದರಿಂದ ಅಂತಿಮ ದರ್ಶನಕ್ಕಾಗಿ ಮನೆಗೆ ಬಂದಿದ್ದ ನೂರಾರು ಜನರಿಗೆ ಅಂತಿಮ ದರ್ಶನ ಮಾಡಲು ಸಾಧ್ಯವಾಗದೆ ತೆರಳಬೇಕಾಯಿತು.

 ಘಟನೆ ನಡೆದ ದಿನದಿಂದ ಇಂದಿನವರೆಗೂ ಸೌದಿ ಅರೇಬಿಯದಲ್ಲಿ ಕಂಪೆನಿ ಎಲ್ಲಾ ವ್ಯವಸ್ಥೆಯನ್ನು ಮಾಡಿದೆ. ದುರ್ಘಟನೆ ನಡೆಯುತ್ತಿದ್ದ ಅದೇ ಕಂಎಪನಿಯಲ್ಲಿ ನಾನು ದುಡಿಯುತ್ತಿದ್ದು ನಾನು ರಾತ್ರಿ ಪಾಳಿ ನಿರ್ವಹಿಸುತ್ತಿದೆ. ನನ್ನ ಸಹೋದರ ಅಶ್ರಫ್ ನಡೆದ ಘಟನೆಯಲ್ಲಿ ಸಾವನ್ನಪ್ಪಿರುವುದು ದುಖ ತಡೆಯಲು ಸಾಧ್ಯವಾಗುತ್ತಿಲ್ಲ. ಹಬ್ಬಕ್ಕಾಗಿ ಮೇ 4 ಕ್ಕೆ ಊರಿಗೆ ಬರಬೇಕಿತ್ತು. ಆದರೆ ಅದಕ್ಕೆ ಮೊದಲೆ ಆತ ಪ್ರಾಣ ಕಳೆದುಕೊಂಡ. ಸೌದಿಯಲ್ಲಿ ದುರ್ಘಟನೆಗೀಡಾದ ಕಂಪೆನಿ ನಮಗೆ ಉತ್ತಮ ಸಹಕಾರ ನೀಡುತ್ತಿದೆ. ಸೌದಿಯಲ್ಲಿ ಐಪಿಎಫ್ ಸಂಘಟನೆ ಸಾಕಷ್ಟು ಸಹಾಯ ಮಾಡಿದೆ. ಊರಿನಲ್ಲಿಯೂ ಪಿಎಫ್‌ಐ ಸಂಘಟನೆ ಸಾಕಷ್ಟು ಸಹಾಯ ಮಾಡಿದೆ. ಆದರೆ ಮುಂಬೈಗೆ ಬಂದ ಪಾರ್ಥಿವ ಶರೀರವನ್ನು ಮಂಗಳುರಿಗೆ ಕಳುಹಿಸಿಕೊಡುವಲ್ಲಿ ಜೆಟ್ ಏರ್‌ವೆಸ್ ನಿರ್ಲಕ್ಷ ತೋರಿದ್ದರಿಂದ ನಾವೆಲ್ಲಾ ಸಾಕಷ್ಟು ಸಮಸ್ಯೆಯನ್ನನುಭವಿಬೇಕಾಯಿತು.

- ಮುಹಮ್ಮದ್ ಶರೀಫ್- ಮೃತ ಅಶ್ರಫ್ ಸಹೋದರ

-----------

 ಜೆಟ್ ಏರ್‌ವೇಸ್ ವಿರುದ್ದ ಕಾನೂನು ಕ್ರಮ-ಕೆ.ಎ.ಸನಿಲ್

ಸೌದಿ ಅರೇಬಿಯದಲ್ಲಿ ಘಟನೆ ನಡೆದ ನಂತರ ಅಲ್ಲಿನವರು ನಮ್ಮಂದಿಗೆ ನಿರಂತರ ಸಂಪರ್ಕವಿದ್ದು ಪಾರ್ಥಿವ ಶರೀರವನ್ನು ಕಳುಹಿಸಿಕೊಟ್ಟರೆ ಅದನ್ನು ಕಾರಣವಿಲ್ಲದೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಕಿಯಿರಿಸಿರುವುದು ಸಾಕಷ್ಟು ನೋವು ತಂದಿದೆ. ಬೆಳಿಗ್ಗೆ ಯಿಂದ ಸಂಜೆಯವರೆಗೆ ವಿಮಾನ ನಿಲ್ದಾಣದಲ್ಲಿಯೆ ಕಾಯಬೇಕಾದ ಪರಿಸ್ಥಿತಿಯನ್ನು ನಿರ್ಮಿಸಿದ್ದಾರೆ. ಅದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚಿಂತನೆ ನಡೆಸುತ್ತಿದ್ದೇನೆ. ಈ ಪರಿಸ್ಥಿತಿ ಮುಂದೆ ಯಾರಿಗೂ ಆಗಬಾರದು- ಕೆ.ಎ.ಸನಿಲ್ - ಮೃತ ಕಾರ್ತಿಕ್ ಸನಿಲ್ ತಂದೆ.

-----------

ವಿಳಂಬಕ್ಕೆ ನಿಖರ ಕಾರಣವಿಲ್ಲ:

   ಮುಂಬಯಿಯಲ್ಲಿ ಮಂಗಳೂರಿಗೆ ಬರಬೇಕಿದ್ದ ಪಾರ್ಥಿವ ಶರೀರವನ್ನು ಬಾಕಿಯಿರಿಸಿದ ಬಗ್ಗೆ ನಿಖರ ಕಾರಣಗಳನ್ನು ಜೆಟ್ ಏರ್‌ವೇಸ್ ಕುಟುಂಬಿಕರಿಗೆ ನೀಡಿಲ್ಲ. ಸೌದಿಯಲ್ಲಿ ಮೃತದೇಹದೊಂದಿಗೆ ನೀಡಿದ ಪತ್ರದಲ್ಲಿ ಅಶ್ರಫ್ ಅವರ ಹುಟ್ಟಿದ ದಿನಾಂಕ ತಪ್ಪಾಗಿ ಮುದ್ರಿತವಾಗಿತ್ತು. ಈ ಕಾರಣಕ್ಕೆ ಎಂಬ ಮಾಹಿತಿಯನ್ನು ಒಮ್ಮೆ ನೀಡಲಾಯಿತು. ಮತ್ತೊಮ್ಮೆ ಪಾರ್ಥಿವ ಶರೀರ ರವಾನೆಗೆ ಮುಂಬೈನಿಂದ ಮದ್ಯಾಹ್ನ ವಿಮಾನವನ್ನು ಬುಕ್ ಮಾಡಲಾಗಿತ್ತು ಎಂಬುದು ಮತ್ತೊಂದು ಕಾರಣ ನಿಡಲಾಯಿತು. ನಿಖರ ಕಾರಣ ಯಾವುದೆಂಬುದನ್ನು ಕೊನೆಗೂ ಜೆಟ್ ಏರ್‌ವೆಸ್ ಕುಟುಂಬಿಕರಿಗೆ ನೀಡಿಲ್ಲ.

     ಕಾರ್ತಿಕ್ ಸನಿಲ್ ಅವರ ಮೃತದೇಹಕ್ಕೆ ಅಂತಿಮ ಸಂಸ್ಕಾರ ಮಾಡಲು ಅವರ ಮಾವ ದುಬೈನಿಂದ ಇಂದು ಬೆಳಿಗ್ಗೆ ಬಂದಿದ್ದರು. ಇಂದು ಬೆಳಿಗ್ಗೆ ಪಾರ್ಥಿವ ಶರೀರ ಬರುತ್ತದೆ ಎಂದು ನಿಗದಿಯಾಗಿದ್ದರಿಂದ ಸಮಯದ ಹೊಂದಾಣಿಕೆ ಮಾಡಿ ಸಂಜೆ ವಿಮಾನದಲ್ಲಿ ಮತ್ತೆ ವಾಪಾಸು ಹೋಗುವ ಯೋಜನೆ ಹಾಕಿಕೊಂಡು ಬಂದ ಅವರಿಗೆ ಪಾರ್ಥಿವ ಶರೀರ ವಿಳಂಬವಾಗಿ ಬಂದ ಹಿನ್ನೆಲೆಯಲ್ಲಿ ಅಂತಿಮ ಕ್ರೀಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಸಂಜೆಯ ಹೊತ್ತಿಗೆ ಮನೆಗೆ ತಲುಪಿದ ಪಾರ್ಥಿವ ಶರೀರವನ್ನು ನೋಡಿ ಮಾತ್ರ ಅವರು ಮತ್ತೆ ದುಬೈಗೆ ವಾಪಾಸು ಹೋಗಬೇಕಾಯಿತು.

============

      ಸೌದಿ ಅರೇಬಿಯಾದಲ್ಲಿ ಸಾವನ್ನಪ್ಪಿದ ದಕ್ಷಿಣ ಕನ್ನಡದ ಮೂರು ಮಂದಿಯ ಪಾರ್ಥಿವ ಶರೀರ ಮಂಗಳವಾರ ಹುಟ್ಟೂರು ತಲುಪಲಿದೆ. ಸೋಮವಾರ ರಾತ್ರಿ ಸೌದಿ ಅರೇಬಿಯದಿಂದ ಮಂಗಳೂರಿಗೆ ಬರುವ ನೇರ ವಿಮಾನದಲ್ಲಿ ಈ ಪಾರ್ಥಿವ ಶರೀರ ಬರಲಿದೆ ಎಂದು ಜುಬೈಲ್ ಯುನೈಟೆಡ್ ಪ್ಲಾಂಟ್ ಕಂಪೆನಿಯ ಉದ್ಯೋಗಿಗಳು ಪತ್ರಿಕೆಗೆ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News