×
Ad

ಮಂಗಳೂರು : ಕೈಗಾರಿಕೆಗಳಿಗೆ ತಕ್ಷಣದಿಂದ ನೀರು ಪೂರೈಕೆ ಸ್ಥಗಿತ - ಸಚಿವ ಸೊರಕೆ

Update: 2016-04-25 18:11 IST

ಮಂಗಳೂರು, ಎ. 25: ನಗರದಲ್ಲಿ ಕುಡಿಯುವ ನೀರಿನ ಕ್ಷಾಮ ಎದುರಾಗಿರುವುದರಿಂದ ಮಂಗಳೂರು ಮಹಾನಗರ ಪಾಲಿಕೆಗೆ ನೀರು ಪೂರೈಕೆ ಮಾಡುತ್ತಿರುವ ತುಂಬೆ ಕಿಂಡಿ ಅಣೆಕಟ್ಟು ಹಾಗೂ ಎಎಂಆರ್ ಅಣೆಕಟ್ಟುಗಳಿಂದ ಕೈಗಾರಿಕೆಗಳಿಗೆ ನೀರು ಪೂರೈಕೆಯನ್ನು ತಕ್ಷಣದಿಂದ ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯದ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.

ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಇಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆ ಸರ್ಕ್ಯೂಟ್ ಹೌಸ್‌ನಲ್ಲಿ ಮುಂಜಾಗೃತಾ ಕ್ರಮಗಳ ಬಗ್ಗೆ ಹಮ್ಮಿಕೊಳ್ಳಲಾದ ಸಭೆಗೆ ಮುನ್ನ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.

ತುಂಬೆ ಕಿಂಡಿ ಅಣೆಕಟ್ಟಿನಿಂದ ನಗರಕ್ಕೆ 160 ಎಂಎಲ್‌ಡಿ ನೀರನ್ನು ಎತ್ತಲಾಗುತ್ತಿದ್ದು, ನಗರಕ್ಕೆ 100 ಎಂಎಲ್‌ಡಿ ಹಾಗೂ ಉಳಿದಂತೆ ವಿವಿಧ ಕೈಕಾರಿಗಳಿಗೆ ನೀರು ಪೂರೈಕೆಯಾಗುತ್ತಿದೆ. ಸದ್ಯ ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ತುಂಬೆ ಅಣೆಕಟ್ಟಿನ ವ್ಯಾಪ್ತಿಯಲ್ಲಿ 8 ಪ್ರದೇಶಗಳಲ್ಲಿ ಹರಿಯುವ ನೀರಿಗೆ ಹಾಕಲಾಗಿರುವ ಬಂಡ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.

ಉಡುಪಿಯಲ್ಲಿ ಸದ್ಯ 20 ದಿನಗಳಿಗೊಮ್ಮೆ ಕೃಷಿಕರಿಗೆ ನೀರು ಪೂರೈಕೆಯೊಂದಿಗೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಇಲ್ಲಿ ಆ ರೀತಿಯ ವ್ಯವಸ್ಥೆ ಆಗಿಲ್ಲ. ಎಂಆರ್‌ಪಿಎಲ್ ಹಾಗೂ ಎಸ್‌ಇಝೆಡ್‌ನವರು ಎಎಂಆರ್ ಡ್ಯಾಂನಿಂದ ನಿರಂತರವಾಗಿ ಅವರದ್ದೇ ವ್ಯವಸ್ಥೆಯಡಿ ನೀರೆತ್ತುತ್ತಿದ್ದಾರೆ. ಅದನ್ನು ತಕ್ಷಣದಿಂದ ಸ್ಥಗಿತಗೊಳಿಸಲಾಗುವುದು ಎಂದರು.

ತುರ್ತು ಪರಿಸ್ಥಿತಿಯಲ್ಲಿ 66 ಟ್ಯಾಂಕರ್‌ಗಳ ಬಳಕೆ

ಸದ್ಯ ತುಂಬೆ ಕಿಂಡಿ ಅಕಣೆಟ್ಟಿನಲ್ಲಿ ಲಭ್ಯವಿರುವ ನೀರು ಮುಂದಿನ ಗರಿಷ್ಠ 10ರಿಂದ 12 ದಿನಗಳಿಗೆ ಪೂರೈಕೆ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಲಭ್ಯವಿರುವ ಬೋರ್‌ವೆಲ್, ತೆರೆದ ಬಾವಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ತುರ್ತು ಪರಿಸ್ಥಿತಿಯಲ್ಲಿ ಟ್ಯಾಂಕರ್‌ಗಳ ಮೂಲಕ ವಾರ್ಡ್‌ಗಳಿಗೆ ನೀರು ಪೂರೈಸಲು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ವಾರ್ಡ್‌ಗೆ ಒಟ್ಟು 66 ಟ್ಯಾಂಕರ್‌ಗಳನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ. ಈ ತಾತ್ಕಾಲಿಕ ನೀರು ಪೂರೈಕೆಗೆ ಸಂಬಂಧಿಸಿ ಸರಬರಾಜಿನ ನಕ್ಷೆಯನ್ನೂ ತಯಾರು ಮಾಡಲಾಗುವುದು. ನಗರದ ಕುಡಿಯುವ ನೀರಿಗೆ ಶಾಶ್ವತ ಪರಿಹಾರವಾಗಿರುವ ತುಂಬೆಯ ನೂತನ ಕಿಂಟಿ ಅಣೆಕಟ್ಟಿನ ಕಾರ್ಯ ಮೇ 31ರೊಳಗೆ ಪೂರ್ಣಗೊಳ್ಳಲಿದೆ. ಸದ್ಯ ಕಿಂಡಿಗಳಿಗೆ ಬಾಗಿಲುಗಳನ್ನು (ಶಟರ್) ಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದು ಸಚಿವ ಸೊರಕೆ ತಿಳಿಸಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಲಕ್ಯಾ ಡ್ಯಾಂನಿಂದ ಮಂಗಳೂರಿಗೆ ನೀರು ಪೂರೈಕೆ ಬಗ್ಗೆ ಮುಂದಿನ ಹಂತದಲ್ಲಿ ಕ್ರಮವಾಗಲಿದೆ ಎಂದರು.

ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ

ಕುಡಿಯುವ ನೀರಿಗೆ ಸಂಬಂಧಿಸಿ ಹೊಸ ಬೋರ್‌ವೆಲ್, ಪೈಪ್‌ಲೈನ್ ಅಳವಡಿಕೆ, ಪಂಪ್ ಅಳವಡಿಕೆಗೆ ಕ್ರಿಯಾಯೋಜನೆ ಸಲ್ಲಿಸಿದರೆ ಅನುದಾನ ಒದಗಿಸಲಾಗುವುದು. ಹಣದ ಕೊರತೆ ಇಲ್ಲ ಎಂದು ಸಚಿವ ಸೊರಕೆ ಸ್ಪಷ್ಟಪಡಿಸಿದರು.

ನದಿಗಳಿಗೆ ಅಲ್ಲಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವ ಸುಮಾರು 1000 ಕೋಟಿ ರೂ.ಗಳ ಪಶ್ಚಿಮವಾಹಿನಿ ಯೋಜನೆ ಕುರಿತಂತೆ ಈಗಾಗಲೇ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೃಹತ್ ನೀರಾವರಿ ಇಲಾಖೆಯ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಸೊರಕೆ ತಿಳಿಸಿದರು.

ವಿತರಣೆಯಲ್ಲಿ ಸಮಸ್ಯೆ: ಶೇ. 40ರಷ್ಟು ನೀರು ಪೋಲು!

ನಗರದಲ್ಲಿ ನೀರು ಪೂರೈಕೆ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಸದ್ಯಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸರಿಪಡಿಸಲಾಗುವುದು. ನಗರದಲ್ಲಿ ಪೂರೈಕೆಯಾಗುವ ನೀರಿನಲ್ಲಿ ಶೇ. 35ರಿಂದ 40ರಷ್ಟು ಪ್ರಮಾಣದ ನೀರು ಪೋಲಾಗುತ್ತಿದೆ ಎಂದೂ ಅವರು ಹೇಳಿದರು.

ವಿದ್ಯುತ್ ಬಿಲ್ ಪಾವತಿಯಾಗದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ವ್ಯವಸ್ಥೆಯಂತೆ ಮುಂದಿನ ದಿನಗಳಲ್ಲಿ ನೀರಿನ ಬಿಲ್ ಪಾವತಿಯಾಗದಿದ್ದರೆ ಸಂಪರ್ಕ ಕಡಿತಗೊಳಿಸುವ ಕ್ರಮವನ್ನು ಜಾರಿಗೊಳಿಸಿದರೆ ನಿಯಂತ್ರಣ ಸಾಧ್ಯವಾಗಲಿದೆ ಎಂದರು.

ಗೋಷ್ಠಿಯಲ್ಲಿ ಶಾಸಕ ಐವನ್ ಡಿಸೋಜಾ, ಮೇಯರ್ ಹರಿನಾಥ್, ಮನಪಾ ಸದಸ್ಯರಾದ ಶಶಿಧರ ಹೆಗ್ಡೆ, ಪ್ರೇಮಾನಂದ ಶೆಟ್ಟಿ, ಲ್ಯಾನ್ಸಿ ಲೋಟ್ ಪಿಂಟೋ, ಅಪ್ಪಿಲತಾ, ಮುಹಮ್ಮದ್, ಟಿ.ಕೆ. ಸುಧೀರ್, ಮತ್ತಿತರರು ಉಪಸ್ಥಿತರಿದ್ದರು.

ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಕ್ರಮ

ಎಎಂಆರ್ ಡ್ಯಾಂನಲ್ಲಿ 12 ಮೀಟರ್‌ಗಳಷ್ಟು ನೀರಿದೆ ಎಂದು ಶನಿವಾರದಂದು ಸುದ್ದಿಗಾರರಿಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿರುವ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ಮೇಯರ್ ಅವರು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಶಾಸಕ ಜೆ.ಆರ್. ಲೋಬೋ ತಿಳಿಸಿದರು.

ಕಳೆದ ಇದೇ ಅವಧಿಗೆ ಹೋಲಿಸಿದರೆ ತುಂಬೆ ಅಣೆಕಟ್ಟಿನಲ್ಲಿ ಸುಮಾರು ಅಡಿಗಳಷ್ಟು ಹಾಗೂ ಎಎಂಆರ್ ಡ್ಯಾಂನಲ್ಲಿ ಸುಮಾರು 12 ಮೀಟರ್‌ನಷ್ಟು ನೀರಿನ ಕೊರತೆ ಇದೆ. ಅಧಿಕಾರಿಗಳು ಎಎಂಆರ್‌ನಲ್ಲಿ 12 ಮೀಟರ್‌ನಷ್ಟು ನೀರಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ವಾಸ್ತವದಲ್ಲಿ ಅಲ್ಲಿ ನೀರೇ ಇಲ್ಲ ಎಂದು ಅವರು ಹೇಳಿದರು.

ಕೈಗಾರಿಕೆಗಳಿಗೆ ಪೂರೈಕೆಯಾಗುವ ನೀರಿನ ಪ್ರಮಾಣ

ತುಂಬೆ ವೆಂಟೆಡ್ ಡ್ಯಾಂನಿಂದ ಎಂಸಿಎಫ್‌ಗೆ 2 ಎಂಜಿಡಿ ಹಾಗೂ ಎನ್‌ಎಂಪಿಟಿಗೆ 0.5 ಎಂಜಿಡಿ ಹಾಗೂ ಇತರ ಕೈಗಾರಿಕೆಗಳಿಗೆ 1 ಎಂಜಿಡಿ ನೀರು ಪೂರೈಕೆಯಾಗುತ್ತಿದೆ. ಎಎಂಆರ್ ಡ್ಯಾಂನಿಂದ ಎಂಆರ್‌ಪಿಎಲ್‌ಗೆ 6 ಎಂಜಿಡಿ ಹಾಗೂ ವಿಶೇಷ ಆರ್ಥಿಕ ವಲಯ (ಎಸ್‌ಇಝೆಡ್)ಕ್ಕೆ 8 ಎಂಜಿಡಿ ನೀರು ಪೂರೈಕೆಯಾಗುತ್ತಿದೆ.

ಸುರತ್ಕಲ್ ಜನತಾ ಕಾಲನಿ ಕೊಳ ಸ್ವಚ್ಛಗೊಳಿಸಿ ನೀರು ಪೂರೈಕೆ

ಸುರತ್ಕಲ್‌ನ ಜನತಾ ಕಾಲನಿಯಲ್ಲಿ ಕೊಳದಲ್ಲಿ ಸಾಕಷ್ಟು ನೀರಿದ್ದು, ಸದ್ಯ ಅದು ಕುಡಿಯಲು ಉಪಯೋಗಿಸುವಂತಿಲ್ಲ. ಅದನ್ನು ಸ್ವಚ್ಛಗೊಳಿಸಿ ಬಳಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮೊಯ್ದಿನ್ ಬಾವಾ ಈ ಸಂದರ್ಭ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News