ತೌಡುಗೋಳಿ: ರಿಕ್ಷಾ ಪಲ್ಟಿಯಾಗಿ ಓರ್ವ ಮೃತ್ಯು, ಇಬ್ಬರಿಗೆ ಗಾಯ
ಕೊಣಾಜೆ: ಕೊಣಾಜೆ ಠಾಣಾ ವ್ಯಾಪ್ತಿಯ ತೌಡುಗೋಳಿಯ ಸರ್ಕುಡೇಲು ಬಳಿ ಅಟೋರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ತೌಡುಗೋಳಿ ನಿವಾಸಿ ರಾಜೇಶ್ (39) ಎಂಬವರೇ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಜಪ್ಪಿನಮೊಗರುವಿನ ರಾಜೇಶ್ ಅವರು ತನ್ನ ಪತ್ನಿ ವಿನುತಾ ಮತ್ತು ಮೂರು ವರ್ಷದ ಮಗು ವೈಷ್ಣವಿಯ ಜೊತೆಗೆ ಪತ್ನಿಯ ಮನೆ ವರ್ಕಾಡಿಯಿಂದ ತಮ್ಮ ರಿಕ್ಷಾದ ಮೂಲಕ ಜಪ್ಪಿನಮೊಗರುವಿಗೆ ತೆರಳುತ್ತಿದ್ದಾಗ ರಿಕ್ಷಾ ತೌಡುಗೋಳಿ ಕ್ರಾಸ್‌ನ ಸರ್ಕುಡೇಲು ಬಳಿ ತಲುಪುವಾಗಲೇ ಅವರ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಸಂದರ್ಭ ರಾಜೇಶ್ ಅವರು ಗಂಭೀರ ಗಾಯಗೊಂಡರು. ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದರೂ ಆ ವೇಳೆಗೆ ಅವರು ಮೃತಪಟ್ಟಿದ್ದಾರೆ. ಸಣ್ಣಪುಟ್ಟ ಗಾಯಗೊಂಡ ಅವರ ಪತ್ನಿ ವಿನುತಾ ಮತ್ತು ಮಗು ವೈಷ್ಣವಿಯವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.