ಇಷ್ರತ್ ಜಹಾನ್ ಪ್ರಕರಣ:ಕೇಂದ್ರಕ್ಕೆ ಚಿದಂಬರಂ ತರಾಟೆ
ಹೊಸದಿಲ್ಲಿ,ಎ.25: ಇಷ್ರತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರು ನಿಜವಾದ ವಿಷಯದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಮಾಣಪತ್ರ ವಿವಾದವನ್ನು ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.
ಇದು ಇಷ್ರತ್ ಪ್ರಕರಣದಲ್ಲಿ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವಾಗಿದೆ. ಅಲ್ಲಿ ನಕಲಿ ಎನ್‌ಕೌಂಟರ್ ನಡೆದಿತ್ತೇ ಮತ್ತು ಅದಾಗಲೇ ಕಸ್ಟಡಿಯಲ್ಲಿದ್ದ ನಾಲ್ವರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿತ್ತೇ ಎನ್ನುವುದು ನಿಜವಾಗಿ ಚರ್ಚೆಯಾಗಬೇಕಾದ ವಿಷಯವಾಗಿದೆ ಎಂದು ಸೋಮವಾರ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಪ್ರಮಾಣಪತ್ರಗಳ ಬಗ್ಗೆ ಹೇಳುವುದಾದರೆ ಗೃಹಸಚಿವರು ಪ್ರಮಾಣಪತ್ರಗಳಿಗೆ ಸಹಿ ಮಾಡುವುದಿಲ್ಲ. ಅಧೀನ ಕಾರ್ಯದರ್ಶಿಗಳು ಸಹಿ ಮಾಡುತ್ತಾರೆ. ಮೊದಲ ಪ್ರಮಾಣಪತ್ರವನ್ನು ನೋಡಿದ್ದು ನನಗೆ ನೆನಪಿಲ್ಲವಾದರೂ ಅದನ್ನು ನಾನು ನೋಡಿದ್ದೆ ಎಂದೇ ಭಾವಿಸೋಣ. ಬಳಿಕ ಬಂದಿದ್ದು ಮ್ಯಾಜಿಸ್ಟ್ರೇಟ್ ಎಸ್.ಪಿ.ತಮಾಂಗ್ ಅವರ ವರದಿ.ಈ ವರದಿ ಕೋಲಾಹಲವನ್ನುಂಟುಮಾಡಿತ್ತು ಮತ್ತು ಮೊದಲ ಪ್ರಮಾಣಪತ್ರದ ಕುರಿತು ತಪ್ಪು ತಿಳುವಳಿಕೆಯನ್ನು ಭಾರತ ಸರಕಾರವು ನಿವಾರಿಸಬೇಕೆಂಬ ಆಗ್ರಹ ಮುಖ್ಯವಾಗಿ ಗುಜರಾತ್ ಸರಕಾರದಿಂದ ಕೇಳಿ ಬಂದಿತ್ತು. ಹೀಗಾಗಿ ಎರಡನೇ ಪ್ರಮಾಣಪತ್ರವನ್ನು ಸಲ್ಲಿಸಲಾಗಿತ್ತು ಎಂದು ಚಿದಂಬರಂ ತನ್ನ ಸರಣಿ ಟ್ವೀಟ್‌ಗಳಲ್ಲಿ ವಿವರಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಗುಜರಾತ ಪೊಲೀಸರು ಹಾಗೂ ಗುಪ್ತಚರ ಸಂಸ್ಥೆ ನೀಡಿದ್ದ ಮಾಹಿತಿಗಳ ಆಧಾರದಲ್ಲಿ ಮೊದಲ ಪ್ರಮಾಣಪತ್ರವನ್ನು ಸಲ್ಲಿಸಲಾಗಿತ್ತು. ಇಷ್ರತ್ ಲಷ್ಕರ್ ಉಗ್ರಳಾಗಿದ್ದಳು ಎಂದು ಈ ಮಾಹಿತಿಗಳಲ್ಲಿ ತಿಳಿಸಲಾಗಿತ್ತು. ಆದರೆ ಎರಡನೇ ಪ್ರಮಾಣಪತ್ರದಲ್ಲಿ ಇದನ್ನು ಕಡೆಗಣಿಸಲಾಗಿತ್ತು ಎಂದಿದ್ದಾರೆ.
ಚಿದಂಬರಂ ಅವರೇ ಬರೆದಿದ್ದರು ಎನ್ನಲಾದ ಎರಡನೇ ಪ್ರಮಾಣಪತ್ರದಲ್ಲಿ ಇಷ್ರತ್ ಭಯೋತ್ಪಾದಕಳಾಗಿದ್ದಳು ಎನ್ನುವುದಕ್ಕೆ ನಿಖರವಾದ ಸಾಕ್ಷಾಧಾರಗಳು ಇಲ್ಲ ಎಂದು ಹೇಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.
ಇಷ್ರತ್ ಮತ್ತು ಆಕೆಯ ಸಹಚರರು ಲಷ್ಕರ್ ಭಯೋತ್ಪಾದಕರಾಗಿದ್ದರು ಎಂದು ಬಣ್ಣಿಸಲಾಗಿದ್ದ ಮೂಲ ಪ್ರಮಾಣಪತ್ರವನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ ಒಂದು ತಿಂಗಳ ಬಳಿಕ ಆಗಿನ ಗೃಹಸಚಿವ ಚಿದಂಬರಂ ಅವರು ಕಡತವನ್ನು ವಾಪಸ್ ತರಿಸಿಕೊಂಡಿದ್ದರು ಎಂದು ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಹೇಳಿದ್ದರು.
ಇದರ ಬೆನ್ನಿಗೇ ಚಿದಂಬರಂ ಅವರು ಪ್ರಮಾಣಪತ್ರದಲ್ಲಿಯ ಬದಲಾವಣೆಗಳಿಗೆ ಪಿಳ್ಳೈ ಅವರೂ ಅಷ್ಟೇ ಹೊಣೆಗಾರರಾಗಿದ್ದಾರೆ ಎಂದು ಹೇಳಿದ್ದರು.