ಮುಲ್ಕಿ: ಪ್ಲಾಸ್ಟಿಕ್ ಕೈ ಚೀಲಗಳನ್ನು ಮಾರುವುದಕ್ಕೆ ನಿರ್ಬಂಧ
ಮುಲ್ಕಿ, ಎ.26: ಯಾವುದೇ ಬಗೆಯ ಪ್ಲಾಸ್ಟಿಕ್ ಕೈ ಚೀಲಗಳನ್ನು ಮಾರುವುದಕ್ಕೆ ಮುಲ್ಕಿ ನಗರದಲ್ಲಿ ನಿರ್ಬಂಧ ವಿಧಿಸಲಾಗಿದ್ದು, ಶನಿವಾರ ಮಧ್ಯಾಹ್ನ ನಗರದ ಅಂಗಡಿಗಳಿಗೆ, ಮಾರುಕಟ್ಟೆಗೆ ದಾಳಿ ಮಾಡಿದ ಅಧಿಕಾರಿಗಳು ಪ್ಲಾಸ್ಟಿಕ್ ಕೈಚೀಲಗಳನ್ನು ವಶ ಪಡಿಸಿಕೊಂಡರು.
ನಗರ ಪಂಚಾಯತ್ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಹೋಲ್‌ಸೇಲ್ ಪ್ಲಾಸ್ಟಿಕ್ ಮಾರಾಟ ಮಾಡುವ ವ್ಯಾಪಾರಿಗಳಿಂದ ಪ್ಲಾಸ್ಟಿಕ್ ಚೀಲಗಳನ್ನು ವಶ ಪಡಿಸಿಕೊಂಡರು. ಈ ಎಲ್ಲಾ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಇನ್ನು ಮುಂದೆ ಯಾವುದೇ ಬಗೆಯ ಪ್ಲಾಸ್ಟಿಕ್ ಕೈಚೀಲಗಳು, ಪ್ಲಾಸ್ಟಿಕ್ ತಟ್ಟೆಗಳು, ಥರ್ಮಾಕೋಲ್ ತಟ್ಟೆಗಳು, ಪ್ಲಾಸ್ಟಿಕ್ ಲೋಟಗಳು, ಪ್ಲಾಸ್ಟಿಕ್ ಬಂಟಿಂಗ್ಸ್‌ಗಳನ್ನು ಮಾರದಂತೆ ಸೂಚನೆ ನೀಡಿದರು.
ಕಾರ್ಯಾಚರಣೆ ಸಂದರ್ಭ ಮುಲ್ಕಿ ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಿರಿಯ ಆರೋಗ್ಯ ನಿರೀಕ್ಷಕರಾದ ಲಿಲ್ಲಿ ನಾಯರ್, ಕಂದಾಯ ನಿರೀಕ್ಷಕ ಅಶೋಕ್ ಮತ್ತು ನಗರ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಎಲ್ಲಾ ರೀತಿಯ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಸರಕಾರ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾತ್ತಿದೆ. ಪ್ಲಾಸ್ಟಿಕ್ ಬಳಕೆಯಲ್ಲಿ ಹಿಂದೆ ಮೈಕ್ರೋನ್ ಮಿತಿ ಹೇರಲಾಗಿತ್ತು.
40 ಮೈಕ್ರೋನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್‌ಗೆ ಮಾತ್ರ ನಿರ್ಬಂಧವಿತ್ತು. ಈಗ ಯಾವುದೇ ಬಗೆಯ ಪ್ಲಾಸ್ಟಿಕ್ ಕೈಚೀಲಗಳನ್ನು ಕೂಡ ಬಳಸುವಂತಿಲ್ಲ ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ವಾಣಿ ವಿ. ಆಳ್ವ ತಿಳಿಸಿದ್ದಾರೆ.