ಎನ್. ಎಸ್. ತಾರಾನಾಥ್‌ಗೆ ಸೇಡಿಯಾಪು ಪ್ರಶಸ್ತಿ

Update: 2016-04-26 12:42 GMT

ಉಡುಪಿ, ಎ.26: ವ್ಯಾಕರಣ, ಛಂದಸ್ಸು, ಶಾಸನಶಾಸ್ತ್ರ, ತೌಲನಿಕ ಶಾಸ್ತ್ರಗಳಲ್ಲಿ ಪರಿಣತರೂ, ಸಂಶೋಧಕರೂ ಆಗಿರುವ ಡಾ. ಎನ್.ಎಸ್. ತಾರಾನಾಥ್‌ರವರು ಉಡುಪಿಯ ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರ ಪ್ರತಿವರ್ಷ ನೀಡುವ ಸೇಡಿಯಾಪು ಪ್ರಶಸ್ತಿಗೆ 2015ನೆ ಸಾಲಿಗೆ ಆಯ್ಕೆಯಾಗಿದ್ದಾರೆ ಎಂದು ಕೇಂದ್ರದ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣ ಭಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

1953ರಲ್ಲಿ ಮೈಸೂರಿನಲ್ಲಿ ಜನಿಸಿದ ಡಾ. ಎನ್. ಎಸ್. ತಾರಾನಾಥ್ ಅಲ್ಲೇ ತಮ್ಮ ಶಿಕ್ಷಣವನ್ನು ಮುಗಿಸಿದ ಬಳಿಕ ಜಾನಪದ, ಭಾರತೀಯ ಸಾಹಿತ್ಯ, ಶಾಸನಶಾಸ್ತ್ರ ಹಾಗೂ ಜೈನಶಾಸ್ತ್ರಗಳಲ್ಲಿ ಡಿಪ್ಲೊಮಾ ಪದವಿಯನ್ನೂ, ಪಿಎಚ್‌ಡಿ ಪದವಿಯನ್ನೂ ಪಡೆದರು. ಕನ್ನಡ ಅಧ್ಯಯನ ಸಂಸ್ಥೆಯ ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ ಸಂಶೋಧನ ಸಹಾಯಕರಾಗಿ (1974-85), ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಅಧ್ಯಾಪಕರಾಗಿ (1985-96), ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರವಾಚಕರಾಗಿ (1996-2004), ಕನ್ನಡ ಪ್ರಾಧ್ಯಾಪಕ(2004-2016)ರಾಗಿ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ.

 ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೂರಾರು ಲೇಖನಗಳನ್ನು ಪ್ರಕಟಿಸಿ ರುವ ಡಾ. ತಾರಾನಾಥ್ ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡ ಛಂದಸ್ಸಿನ ಚರಿತ್ರೆ ಯೋಜನೆಗಳಲ್ಲಿ ಕೂಡ ಕೆಲಸ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ- ಕನ್ನಡ-ಇಂಗ್ಲಿಷ್ ನಿಘಂಟುವಿನ ಪರಿಷ್ಕರಣಾ ಯೋಜನೆಯ ಸಂಪಾದಕ ಸಮಿತಿಯ ಸದಸ್ಯರಾಗಿ, ಚಾಮರಾಜನಗರ ಜಿಲ್ಲಾ ಗೆಜೆಟಿಯರ್ ಸಲಹಾ ಸಮಿತಿಯ ಸದಸ್ಯರಾಗಿ, ಕನ್ನಡ ಶಾಸ್ತ್ರೀಯ ಭಾಷಾ ವರದಿ ಸಲ್ಲಿಕೆಯ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಈಗ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಪ್ಲಾನಿಂಗ್ ಆ್ಯಂಡ್ ಮಾನಿಟರಿಂಗ್‌ಬೋರ್ಡ್‌ನ ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News