×
Ad

ಮಂಗಳೂರು: ರೋಟರಿ ವಂದನಾ ಪ್ರಶಸ್ತಿಗೆ ಡಾ ಶಶಿಕಿರಣ್ ಶೆಟ್ಟಿ ಆಯ್ಕೆ

Update: 2016-04-26 18:31 IST

ಮಂಗಳೂರು,ಎ.26: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಾಯೋಜಿಸುತ್ತಿರುವ ವಾರ್ಷಿಕ ವಂದನಾ ಪ್ರಶಸ್ತಿಗೆ ಮುಂಬಯಿ ನಗರ ಮೂಲದ ಖ್ಯಾತ ಉದ್ಯಮಿ ಹಾಗೂ ಆಲ್ ಕಾರ್ಗೋ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾದ ಡಾ ಶಶಿಕಿರಣ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ಏ. 29ರಂದು ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಸಂಜೆ 8 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

    ಕಾರ್ಯಕ್ರಮದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್‌ರವರು ಮುಖ್ಯ ಅತಿಥಿಯಾಗಿ ,ರೋಟರಿ ಸಹಾಯಕ ಗವರ್ನರ್ ರಾಮಕೃಷ್ಣ ಕಾಮತ್ ಮತ್ತು ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿಯವರಾದ ಮಹಾದೇವ ಸ್ವಾಮಿಯವರು ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು. ರೋಟರಿ ಸಂಸ್ಥೆಯ ಅಧ್ಯಕ್ಷರಾದ ಇಲಿಯಾಸ್ ಸ್ಯಾಂಕ್ಟಿಸ್‌ರವರು ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು. ರೋಟರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷರಾದ ರಾಜೇಶ್ ದೇವಾಡಿಗ ಉಪಸ್ಥಿತರಿರುವರು.

    ಡಾ ಶಶಿಕಿರಣ್ ಶೆಟ್ಟಿಯವರು ನಗರದ ಖ್ಯಾತ ಎಸ್.ಕೆ.ಎಸ್. ಪ್ಲಾನೆಟ್ ಗಗನಚುಂಬಿ ಅತ್ಯಾಧುನಿಕ ಸೌಲಭ್ಯವುಳ್ಳ 40 ಅಂತಸ್ತಿನ ಮತ್ತು 171 ಐಷಾರಾಮಿ ವಸತಿಗೃಹ ಸಂಕೀರ್ಣ ಪ್ರಾಯೋಜಕರಾಗಿಯೂ ಖ್ಯಾತಿ ಗಳಿಸಿದ್ದಾರೆ. ಹಲವಾರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಂಘ - ಸಂಸ್ಥೆಗಳು ಇವರಿಗೆ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಸಾಧಿಸಿದ ವಿಶಿಷ್ಟ ಸಾಧನೆಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

 ಮಂಗಳೂರು ವಿಶ್ವದ್ಯಾನಿಲಯವು ಅವರು ಉದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆ ಮತ್ತು ಸಮಾಜಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ 2015ನೇ ಸಾಲಿನ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News