×
Ad

ಉಡುಪಿಯಲ್ಲಿ ನೆತ್ತಿ ಮೇಲೆ ಹಾದುಹೋದ ಸೂರ್ಯ : ವರ್ಷದಲ್ಲಿ ಎರಡು ಬಾರಿ ‘ಶೂನ್ಯ ನೆರಳಿನ ದಿನ’

Update: 2016-04-26 18:50 IST

ಉಡುಪಿ, ಎ.26: ಉಡುಪಿಯಲ್ಲಿ ಇಂದು ಮಧ್ಯಾಹ್ನ 12:32ಕ್ಕೆ ಸೂರ್ಯ ನೆತ್ತಿಯ ಮೇಲೆ ಹಾದು ಹೋಗುವ ಮೂಲಕ ಶೂನ್ಯ ನೆರಳಿನ ದಿನವನ್ನು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಿರೂಪಿಸಲಾಯಿತು.

ಕಾಲೇಜಿನ ಆವರಣದಲ್ಲಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರಿಂದ ಪ್ರಾತ್ಯಕ್ಷಿಕೆಯ ಮೂಲಕ ಈ ಶೂನ್ಯ ನೆರಳನ್ನು ತೋರಿಸಲಾಯಿತು. ಟೇಬಲಿನ ಮೇಲೆ ಇರಿಸಲಾದ ಕಬ್ಬಿಣದ ಸರಳು, ಗಾಜು, ಮರದ ಕಡ್ಡಿಯ ನೆರಳು ಸೂರ್ಯ ನೆತ್ತಿ ಮೇಲೆ ಬರುತ್ತಿದ್ದಂತೆ ಮಾಯವಾಯಿತು. ಹೀಗೆ ಶೂನ್ಯ ನೆರಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಪಿ.ಭಟ್ ಈ ಕುರಿತು ಮಾಹಿತಿ ನೀಡಿದರು. ‘ಬೆಂಗಳೂರಿನ ತಾರಾಲಯವು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿನ ಶೂನ್ಯ ನೆರಳಿನ ದಿನಗಳನ್ನು ಪ್ರಕಟಿಸಿತ್ತು. ಉಡುಪಿಯಲ್ಲಿ ಆ ದಿನವನ್ನು ಎ.25 ಎಂಬುದಾಗಿ ಪ್ರಕಟಿಸಲಾಗಿತ್ತು. ಆದರೆ ನಾವು ಲೆಕ್ಕಾಚಾರ ಹಾಕಿ ಆ ದಿನ ವನ್ನು ಎ.26 ಎಂಬುದಾಗಿ ಕಂಡುಕೊಂಡೆವು. ಇಂದು ಕುಂದಾಪುರದಿಂದ ಕಾಸರಗೋಡುವರೆಗಿನ ವ್ಯಾಪ್ತಿಯಲ್ಲಿ ಈ ಶೂನ್ಯ ದಿನವನ್ನು ವೀಕ್ಷಿಸಬಹುದು. ಕಾರವಾರದವರಿಗೆ ಈ ಅವಕಾಶ ಎ.30ರಂದು ದೊರೆಯಲಿದೆ ಎಂದು ಡಾ. ಎ.ಪಿ.ಭಟ್ ತಿಳಿಸಿದರು. ‘ಕರ್ನಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತಗಳ ನಡುವಿನ ಪ್ರದೇಶಗಳಿಗೆ ವರ್ಷದಲ್ಲಿ ಎರಡು ದಿನಗಳಲ್ಲಿ ಸೂರ್ಯನೆತ್ತಿಯ ಮೇಲೆ ಹಾದು ಹೋಗಲಿದೆ. ಅಂದು ಮಾತ್ರ ಮಧ್ಯಾಹ್ನದ ನೆರಳು ಕಾಣಿಸದೆ ಶೂನ್ಯವಾಗಲಿದೆ. ವರ್ಷಕ್ಕೆ ಎರಡು ಬಾರಿ ಈ ದಿನ ಬರುತ್ತಿದ್ದು, ಇದೇ ಮೊದಲ ಬಾರಿಗೆ ಪ್ರಾತ್ಯಕ್ಷಿಕೆಯ ಮೂಲಕ ಅದನ್ನು ವಿದ್ಯಾರ್ಥಿಗಳಿಗೆ ತೋರಿಸಿಕೊಡಲಾಯಿತು. ಇಷ್ಟು ವರ್ಷ ಸರಿಯಾದ ದಿನ ಗೊತ್ತಿರದ ಕಾರಣ ಯಾರು ಕೂಡ ಅದನ್ನು ವಿಕ್ಷೀಸುವ ಪ್ರಯತ್ನ ಮಾಡಿಲ್ಲ’ ಎಂದರು.

ಡಿ.21ರಿಂದ ಜೂ.21ರವರೆಗೆ ಉತ್ತರಾಯಣದಲ್ಲಿ ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಹಾಗೂ ಜೂ.22ರಿಂದ ಡಿ.21ರವರೆಗೆ ದಕ್ಷಿಣಾಯಣದಲ್ಲಿ ಸೂರ್ಯ ಉತ್ತರದಿಂದ ದಕ್ಷಿಣಕ್ಕೆ ಚಲಿಸುತ್ತದೆ. ಭೂಮಿಯು ಈ ಸಮಯದಲ್ಲಿ 23.5 ಡಿಗ್ರಿ ದಕ್ಷಿಣ ಹಾಗೂ ಉತ್ತರಕ್ಕೆ ವಾಲಿರುತ್ತದೆ. ಆಗ ನಮಗೆ ಸೂರ್ಯ ವಾಲಿದಂತೆ ಕಾಣುತ್ತದೆ. ಇದರಿಂದ ಸೂರ್ಯ ನಮ್ಮ ನೆತ್ತಿ ಮೇಲೆ ಹಾದುಹೋಗುತ್ತದೆ. ದಕ್ಷಿಣಾಯಣದಲ್ಲಿ ಆ.18ರಂದು ಮತ್ತೆ ಉಡುಪಿಯಲ್ಲಿ ಶೂನ್ಯ ನೆರಳಿನ ದಿನ ಆಗಮಿಸಲಿದೆ ಎಂದು ಅವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಗದೀಶ್ ಶೆಟ್ಟಿ, ಉಪನ್ಯಾಸಕರಾದ ಪ್ರೊ.ರಾಘವೇಂದ್ರ, ಪ್ರೊ.ಆನಂದ್, ರಶ್ಮಿತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News